ನವದೆಹಲಿ, ಫೆ 26(DaijiworldNews/AA): ಪದ್ಮಶ್ರೀ ಪುರಸೃತ ಜನಪ್ರಿಯ ಘಜಲ್ ಮತ್ತು ಹಿನ್ನೆಲೆ ಗಾಯಕ ಪಂಕಜ್ ಉಧಾಸ್ ಅವರು ತೀವ್ರ ಅನಾರೋಗ್ಯದಿಂದಾಗಿ ಇಂದು ನಿಧನ ಹೊಂದಿದ್ದಾರೆ. ಇದೀಗ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, ಪಂಕಜ್ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ತಮ್ಮ ಸ್ವರದ ಮೂಲಕ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಅವರಿಗೆ ಇತ್ತು. ಅವರ ಘಜಲ್ ಗಳು ನಮ್ಮ ಅಂತರಾಳಕ್ಕೆ ಮುಟ್ಟುತ್ತಿದ್ದವು. ಪಂಕಜ್ ಅವರೊಂದಿಗೆ ನಡೆಸಿದ ಸಂವಾದಗಳು ನನ್ನ ನೆನಪಿನಿಂದ ಇನ್ನೂ ಮಾಸಿಲ್ಲ. ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆಂದು’ ಎಂದು ಮೋದಿ ಬರೆದುಕೊಂಡಿದ್ದಾರೆ.
ಇನ್ನು ಪಂಕಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಸುಮಧುರ ಕಂಠದಿಂದ ಲಕ್ಷಾಂತರ ಕೇಳುಗರ ಹೃದಯವನ್ನು ಪಂಕಜ್ ಉಧಾಸ್ ಅವರು ಗೆದ್ದಿದ್ದಾರೆ. ತಮ್ಮ ಸಾಧನೆ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ತಿಳಿಸಿದ್ದಾರೆ.