ನವದೆಹಲಿ, ಫೆ 26(DaijiworldNews/AA): ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
2022ರ ಅಕ್ಟೋಬರ್ ನಲ್ಲಿ ಅಣ್ಣಾಮಲೈ ಅವರು ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ, ಪಟಾಕಿ ಸಿಡಿಸುವ ವಿಚಾರವಾಗಿ ಕ್ರೈಸ್ತ ಸಮುದಾಯದ ವಿರುದ್ಧ ದ್ವೇಷದ ಮಾತುಗಳನ್ನು ಆಡಿದ್ದರೆಂಬ ಆರೋಪವಿದೆ. ಇನ್ನು ಅಣ್ಣಾಮಲೈ ವಿರುದ್ಧದ ಪ್ರಕರಣವನ್ನ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ದೀಪಾಂಕರ್ ದತ್ತ ಅವರ ವಿಭಾಗೀಯ ಪೀಠ, ’ಮೇಲ್ನೋಟಕ್ಕೆ ಇದರಲ್ಲಿ ದ್ವೇಷದ ಮಾತುಗಳಿಲ್ಲ’ ಎಂದು ತಿಳಿಸಿತು. ಅಣ್ಣಾಮಲೈ ವಿರುದ್ಧ ದೂರು ಸಲ್ಲಿಸಿದ್ದ ವಿ.ಪೀಯೂಷ್ ಅವರಿಗೆ ನೋಟಿಸ್ ಜಾರಿಗೆ ಪೀಠ ಆದೇಶ ಹೊರಡಿಸಿದೆ.
ಇನ್ನು ಅಣ್ಣಾಮಲೈ ಅವರು ತಮ್ಮ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಮನ್ಸ್ ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಬಳಿಕ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಣ್ಣಾಮಲೈ ಅವರು ಸುಪ್ರೀಂನ ಮೆಟ್ಟಿಲೇರಿದ್ದರು.