ಭೋಪಾಲ್, ಫೆ 27(DaijiworldNews/AA): ಯುಪಿಎಸ್ಸಿ ಬರೆಯುವ ಕೆಲ ವಿದ್ಯಾರ್ಥಿಗಳು ತರಬೇತಿಯನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಇನ್ನು ಕೆಲವರು ಸ್ವಯಂ ಅಧ್ಯಯನದ ಮೂಲಕವೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಸ್ವಯಂ ಅಧ್ಯಯನದ ಮೂಲಕವೇ ಸಾಧನೆ ಮಾಡಿರುವ ಐಎಎಸ್ ಅಧಿಕಾರಿ ಪಲ್ಲವಿ ಮಿಶ್ರಾ ಅವರ ಯಶೋಗಾಥೆ ಇದು.
ಪಲ್ಲವಿ ಮಿಶ್ರಾ ಅವರು ಮೂಲತಃ ಭೋಪಾಲ್ ನವರು. ಅವರ ತಂದೆ ಅಜಯ್ ಮಿಶ್ರಾ ಅವರು ಹಿರಿಯ ವಕೀಲರು. ತಾಯಿ ಡಾ. ರೇಣು ಮಿಶ್ರಾ ಅವರು ಹಿರಿಯ ವಿಜ್ಞಾನಿ. ಆಕೆಯ ಹಿರಿಯ ಸಹೋದರ ಆದಿತ್ಯ ಮಿಶ್ರಾ ಅವರು ಇಂದೋರ್ ನ ಡೆಪ್ಯುಟಿ ಕಮಿಷನರ್ ಆಗಿದ್ದು ಅವರು ಐಪಿಎಸ್ ಅಧಿಕಾರಿಯಾಗಿದ್ದಾರೆ.
ಭೋಪಾಲ್ ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಪಲ್ಲವಿ ಅವರು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದರು. ಪಲ್ಲವಿ ಅವರು ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಕಾರಣ ಕಾನೂನು ಪದವಿ ಮುಗಿಸಿದ ಬಳಿಕ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ. ಶಾಸ್ತ್ರೀಯ ಗಾಯಕಿಯಾಗಿ ತರಬೇತಿ ಪಡೆದ ಪಲ್ಲವಿ ಅವರು ದಿವಂಗತ ಪಂಡಿತ್ ಸಿದ್ಧರಾಮ್ ಕೊರವರ ಅವರಿಂದ ಸಂಗೀತಾಭ್ಯಾಸ ಮಾಡಿದ್ದಾರೆ.
ಪಲ್ಲವಿ ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಆದರೆ ಛಲ ಬಿಡದೇ 2ನೇ ಬಾರಿ ಪರೀಕ್ಷೆ ಬರೆಯಲು ಕಠಿಣ ತಯಾರಿಯನ್ನು ನಡೆಸುತ್ತಾಳೆ. ಬಳಿಕ 2022ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 73ನೇ ರ್ಯಾಂಕ್ ಗಳಿಸಿ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ.
ಇನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಸಾಕಷ್ಟು ಸಕ್ರಿಯರಾಗಿರುವ ಪಲ್ಲವಿ ಮಿಶ್ರಾ ಅವರಿಗೆ 30 ಸಾವಿರಕ್ಕೂ ಅಧಿಕ ಅನುಯಾಯಿಗಳಿದ್ದಾರೆ. ಪಲ್ಲವಿ ಅವರು ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರದ ಯೋಜನೆಗಳನ್ನು ಮಹಿಳೆಯರಿಗೆ ತಲುಪಿಸುವಲ್ಲಿ ಶ್ರಮ ವಹಿಸುತ್ತಿದ್ದಾರೆ.