ಧಾರವಾಡ, ಫೆ 27(DaijiworldNews/SK): ನಮ್ಮ ಕಾಲದ ರಾಜಕಾರಣಕ್ಕೂ, ಇಂದಿನ ಕಾಲದ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಈಗಿನ ರಾಜಕಾರಣದ ಸ್ಥಿತಿಯನ್ನು ನೋಡಿದಾಗ ಕೋಟಿ ಕೊಟ್ಟರೂ ನಾನು ಮಾತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವೆ ಡಾ. ಲೀಲಾವತಿ ಆರ್.ಪ್ರಸಾದ್ ತಿಳಿಸಿದ್ದಾರೆ.
ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಲೀಲಾವತಿ ಆರ್.ಪ್ರಸಾದ್ ಅವರು, ಈಗ ಯಾರದರೂ ಬಂದು ಚುನಾವಣೆಗೆ ಸ್ಪರ್ಧಿಸುತ್ತಿರಾ ಎಂದು ಕೇಳಿದರೇ ನಾನು ಅವರಿಗೆ ದೊಡ್ಡದಾಗಿ ಕೈ ಮುಗಿದು ಬಿಡುತ್ತೇನೆ ಎಂದಿದ್ದಾರೆ.
ಈಗಿನ ರಾಜಕಾರಣದಲ್ಲಿ ತತ್ವ, ಸಿದ್ದಾಂತ, ನ್ಯಾಯ, ನಿಷ್ಠೆ, ಹಿರಿಯರಿಗೆ ಗೌರವ ಕೊಡುವ ಯಾವುದೇ ಅಂಶವು ಕಾಣುತ್ತಿಲ್ಲ. ಅಷ್ಟೊಂದು ಕೆಳಮಟ್ಟದ ರಾಜಕಾರಣ ಇದೆ. ನಾನು ಇಲ್ಲಿಯವರೆಗೆ 10 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆದರೆ ಅ ಅವಧಿಯಲ್ಲಿ ಹಣ ಮಾಡಿಲ್ಲ, ಹೆಸರು ಉಳಿಸಿಕೊಂಡಿದ್ದೇನೆ. ಇತ್ತೀಚಿನ ರಾಜಕಾರಣದ ಸ್ಥಿತಿ ಗತಿಯನ್ನು ನೋಡಿದಾಗ ನಾವೇ ಅದೃಷ್ಟವಂತರು. ಹಳೆಯ ರಾಜಕಾರಣದಲ್ಲಿ ರಾಜಕೀಯಕ್ಕೆ ಬಂದು ಒಂದಿಷ್ಟು ಒಳ್ಳೆಯ ಸೇವೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.