ಬೆಂಗಳೂರು, ಫೆ 27(DaijiworldNews/SK): ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಇದೀಗ ಈ ವಿಚಾರವಾಗಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನ ಸೌಧದಲ್ಲೇ ಮೊಳಗಿದೆ ಎಂದರೆ ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿ ಕೊಂಡಿರಬಹುದು ಎಂದು ಅಂದಾಜಿಸಲು ಇಂದಿನ ಘಟನೆ ಸಾಕ್ಷಿ ಒದಗಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸಭೆಗೆ ಆಯ್ಕೆಮಾಡಿ ಕಳುಹಿಸಿರುವ ಸೈಯದ್ ನಾಸೀರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು. ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ಸಾಕ್ಷಿಗಳು ಕಣ್ಣೆದುರಿಗೇ ಇರುವಾಗ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು.