ಬೆಂಗಳೂರು, ಫೆ 28(DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರ ತಮಿಳುನಾಡಿನ ಭೇಟಿ ವೇಳೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ತಿರುಪುರದಲ್ಲಿ ರೋಡ್ ಶೋ ವೇಳೆ ಪ್ರಧಾನಿಯವರಿದ್ದ ವಾಹನವನ್ನು ಗುರಿಯಾಗಿಸಿ ಮೊಬೈಲ್ ಪೋನ್ ಎಸೆಯಲಾಗಿದೆ.
ಪ್ರಧಾನಿ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದು ಕೇರಳದಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ನಂತರ ತಿರುಪುರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ 'ಎನ್ ಮನ್ ಎನ್ ಮಕ್ಕಳ್' ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದರು.. ಖಾಸಗಿ ವಿಮಾನದಲ್ಲಿ ಕೊಯಮತ್ತೂರಿನ ವಾಯುಸೇನೆ ನೆಲೆಗೆ ಆಗಮಿಸಿದ ಪ್ರಧಾನಿ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತಿರುಪುರ ತಲುಪಿದರು. ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ಹಾಗೂ ಅಣ್ಣಾಮಲೈ ಸೇರಿದಂತೆ ಮತ್ತಿತರರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರು ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದರು.
ರೋಡ್ ಶೋ ವೇಳೆ ಜನಸಂದಣಿಯಿಂದ ಪ್ರಧಾನಿ ಮೋದಿಯವರ ವಾಹನದ ಮೇಲೆ ಸೆಲ್ ಫೋನ್ ಎಸೆಯಲಾಗಿದೆ. ಇದನ್ನು ಕಂಡ ಪಕ್ಕದಲ್ಲಿದ್ದ ಎಲ್.ಮುರುಗನ್ ಬೆಚ್ಚಿಬಿದ್ದರು. ಪ್ರಧಾನಿಯೂ ಈ ವೇಳೆ ಮೊಬೈಲ್ ಗಮನಿಸಿದ್ದಾರೆ. ಮೊಬೈಲ್ ಎಸೆದಿರುವ ವಿಡಿಯೋ ರೆಕಾರ್ಡ್ ಆಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ, ತಮಿಳುನಾಡು ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ.