ತಿರುನೆಲ್ವೀಲಿ, ಫೆ 28(DaijiworldNews/AA): ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಕೇಂದ್ರದ ಯೋಜನೆಗಳಿಗೆ ಸಹಕರಿಸುತ್ತಿಲ್ಲ. ಡಿಎಂಕೆ ಹಾಗೂ ಅದರ ಮಿತ್ರ ಪಕ್ಷ ಕಾಂಗ್ರೆಸ್ ಜನರ ನಡುವೆ ಬಿರುಕು ಮೂಡಿಸುತ್ತಿದೆ. ಆ ಪಕ್ಷಗಳು ಕುಟುಂಬ ರಾಜಕೀಯ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಟೀಕಿಸಿದ್ದಾರೆ.
ತಮಿಳುನಾಡು ಪ್ರಭು ಶ್ರೀರಾಮನೊಂದಿಗೆ ಜನರಿಗೆ ಹೆಚ್ಚು ಚಿರಪರಿಚಿತವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಧನುಷ್ಕೋಡಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿದ್ದೆ. ಸಂಸತ್ತಿನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಚರ್ಚೆಯ ವೇಳೆ ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಡಿಎಂಕೆ ಸಂಸದರ ಪಲಾಯನವು ಜನರ ನಂಬಿಕೆಯ ಮೇಲಿನ ದ್ವೇಷವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಇಷ್ಟು ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ಇಡೀ ದೇಶವೇ ಹರ್ಷ ವ್ಯಕ್ತಪಡಿಸಿದೆ. ಸಂಸತ್ತಿನಲ್ಲಿ ರಾಮಮಂದಿರಕ್ಕೆ ಸಂಬಂಧಪಟ್ಟ ವಿಷಯ ಪ್ರಸ್ತಾಪವಾಯಿತು. ಆದರೆ ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಇದರಿಂದ ಡಿಎಂಕೆ ಪಕ್ಷ ನಿಮ್ಮ ನಂಬಿಕೆಯನ್ನು ಎಷ್ಟು ದ್ವೇಷಮಾಡುತ್ತದೆ ಎಂದು ತಿಳಿಯುತ್ತದೆ. ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷ ಜನರ ಮತ್ತು ಸಮಾಜದ ನಡುವೆ ಬಿರುಕು ಮೂಡಿಸಲು ಹೊಸ ಹೊಸ ಆಲೋಚನೆಗಳನ್ನ ಮಂಡಿಸುತ್ತಿದ್ದಾರೆ. ಆದರೆ ನಾವು ಎಲ್ಲರನ್ನೂ ಕುಟುಂಬದವರಂತೆ ಪರಿಗಣಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು.