ಡೆಹ್ರಾಡೂನ್, ಫೆ 28(DaijiworldNews/AA): ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು 800ಮೀ ಆಳದ ಕಂದಕಕ್ಕೆ ಬಿದ್ದು, 6 ಮಂದಿ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಾಖಂಡದ ಚಕ್ರತಾ ಪ್ರದೇಶದಲ್ಲಿ ಇಂದು ನಡೆದಿದೆ.
ಅವಘಡದಲ್ಲಿ ಮೃತಪಟ್ಟವರನ್ನು ಸಂಜು(35), ಸೂರಜ್(35), ಶೀತಲ್(25), ಸಂಜನಾ(21), ದಿವ್ಯಾಂಶ್(10) ಹಾಗೂ ಯಶ್(5) ಎಂದು ಗುರುತಿಸಲಾಗಿದೆ.
ಅಪಘಾತಗೊಳಪಟ್ಟ ಕಾರಿನಲ್ಲಿ ಒಟ್ಟು 7 ಮಂದಿ ಪಂದ್ರಾನುದಿಂದ ಹಿಮಾಚಲ ಪ್ರದೇಶದ ತ್ಯುನಿ ಎಂಬಲ್ಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ತ್ಯುನಿ ಅಟಲ್ ಮೋಟಾರು ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಕಾರು ಕಂದಕಕ್ಕೆ ಉರುಳಿದ್ದು, 6 ಮಂದಿ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣವೇ ಎಸ್ ಡಿಆರ್ ಎಫ್ ತಂಡ ಹಾಗೂ ತ್ಯುನಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ರಕ್ಷಣಾ ತಂಡವು ಕಂದಕದಿಂದ 6 ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.