ಬಾಗಲಕೋಟೆ, ಫೆ 29(DaijiworldNews/MS): ಜೀವನದಲ್ಲಿ ಯಶಸ್ಸು ಸಾಧಿಸಿ ಮುನ್ನಡೆಯಲು ಇರುವ ಏಕೈಕ ಅಸ್ತ್ರ ಶಿಕ್ಷಣ. ಶಿಕ್ಷಣ ಎನ್ನುವುದು ಸಮಾಜದ ಮೂಲ ಅಡಿಪಾಯ ಎಂದೆನಿಸಿದ್ದು ಲಿಂಗ, ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿ ಮತ್ತು ಧರ್ಮವನ್ನು ಲೆಕ್ಕಿಸದೆ ಆರ್ಥಿಕ ಸ್ವಾತಂತ್ರ್ಯ, ಜ್ಞಾನ ಸೇರಿದಂತೆ ಜೀವನದ ವಿವಿಧ ಅಂಶಗಳನ್ನು ಸುಧಾರಿಸಲು ಹಾಗೂ ಮಹೋನ್ನತ ಗುರಿಯನ್ನು ಸಾಧಿಸಲು ಅವಕಾಶವನ್ನೊದಗಿಸುವ ಕ್ಷೇತ್ರವಾಗಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಗಂಗೂರ ಗ್ರಾಮದ ಯುವತಿ ಭಾಗ್ಯಶ್ರೀ ಮಾದರ ಅವರು ಕೂಡಾ ಶಿಕ್ಷಣವನ್ನೇ ಅಸ್ತ್ರವಾಗಿ ಸಾಧನೆಯ ಶಿಖರವೇರಿದ್ದಾರೆ.
ಭಾಗ್ಯಶ್ರೀ ಮಾದರ ಅವರ ತಂದೆ ದುರಗಪ್ಪ ಮಾದರ ಹಾಗೂ ತಾಯಿ ಯಮನವ್ವ ಮಾದರ ಇಬ್ಬರೂ ಅನಕ್ಷರಸ್ಥರು, ಜೊತೆಗೆ ದಿನನಿತ್ಯ ದುಡಿದರೇ ಮಾತ್ರ ಬದುಕು ಸಾಗಿತು.ಆದರೆ ಭಾಗ್ಯಶ್ರೀ ಅಪ್ಪಟ ಗ್ರಾಮೀಣ ಪ್ರತಿಭೆ. ಎಂತಹ ಕಠಿಣ ಪರಿಸ್ಥಿತಿ ಇದ್ದರೂ ಓದಬೇಕು, ಸಾಧಿಸಬೇಕು ಎಂಬ ಛಲ ಅವರ ನಿರಂತರ ಪ್ರಯತ್ನದ ಫಲವಾಗಿ ಭಾಗ್ಯಶ್ರೀ ಈಗ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದ ತಂದೆ ತಾಯಿಯ ಕಠಿಣ ಪರಿಶ್ರಮ, ಅವಿರತ ಬೆಂಬಲಕ್ಕೆ ಸಾಧಿಸಿ ತೋರಿಸಿರುವ ಭಾಗ್ಯಶ್ರೀ ಮಾದರಿಯೂ ಆಗಿದೆ.
ಭಾಗ್ಯಶ್ರೀ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಗಂಗೂರಿನ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಣ ಸಮೀಪದ ಚಿತ್ತರಗಿಯ ಸರಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನುಅಮೀನಗಡದ ಸಂಗಮೇಶ್ವರ ಕಾಲೇಜ್ನಲ್ಲಿ ಪೂರೈಸಿದರು.
ತಾನು ಪಶುವೈದ್ಯಾಧಿಕಾರಿಯಾಗಬೇಕು. ರೈತರಿಗೆ ನೆರವಾಗಬೇಕು ಎಂಬುದು ಭಾಗ್ಯಶ್ರೀ ಬಯಕೆಯಾಗಿತ್ತು. ಆದರೆ ಮಗಳು ಕಾನೂನು ಪದವಿ ಪಡೆದು ನ್ಯಾಯಾಧೀಶೆಯಾಗಬೇಕು ಎನ್ನುವುದು ತಂದೆಯ ಆಸೆ. ಅಪ್ಪನ ಆಸೆಯಂತೆಯೇ ಆಗಲಿ ಎಂದು ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಸಿ. ನಂದಿಕೋಲುಮಠ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಎಲ್ಎಲ್ಬಿಗೆ ಭಾಗ್ಯಶ್ರೀ ಸೇರಿಕೊಂಡರು. ಐದು ವರ್ಷ ಸತತ ಓದು, ಕಾನೂನಿನ ಅರಿವು, ಕಾಯ್ದೆ ಕಟ್ಟಳೆಗಳ ಕುರಿತಾದ ತಿಳುವಳಿಕೆ, ಪ್ರಮುಖ ಪ್ರಕರಣಗಳ ಒಳನೋಟ.. ಹೀಗೆ ಎಲ್ಲಾ ಆಯಾಮದಲ್ಲೂ ಭಾಗ್ಯಶ್ರೀ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಹೋದರು.
2018ರಲ್ಲಿ ಬಾಗಲಕೋಟೆಯ ಬಿವಿವಿಯ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ಎರಡು ವರ್ಷ ಹುನಗುಂದ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. ಹೈಕೋರ್ಟ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷ ಕ್ಲರ್ಕ್/ ಸಂಶೋಧನಾ ಸಹಾಯಕಿಯಾಗಿ ಕಾರ್ಯನಿರ್ವಹಿಸಿದರು. "ಕೆಲಸದಲ್ಲಿದ್ದರೆ ನಿರೀಕ್ಷಿತ ಸಾಧನೆ ಮಾಡಲಾಗುವುದಿಲ್ಲ" ಎಂದು ಆ ಹುದ್ದೆ ತೊರೆದು ಭಾಗ್ಯಶ್ರೀ ಪರೀಕ್ಷೆಗಾಗಿ ಅಧ್ಯಯನ ನಡೆಸಿದರು. ಸತತ ಎರಡು ಬಾರಿ ಸಿವಿಲ್ ನ್ಯಾಯಾಧೀಶೆ ಹುದ್ದೆಗೆ ಪರೀಕ್ಷೆ ಬರೆದರೂ ಮೌಖಿಕ ಸಂದರ್ಶನದಲ್ಲಿ ಹಿನ್ನಡೆಯಾಯಿತು. ಆದರೆ, ಮೂರನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಕಂಡರು
ನಾನು ಕೂಲಿ ಮಾಡಿದರೂ ಚಿಂತೆಯಿಲ್ಲ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಹಠ ತೊಟ್ಟಿದ್ದೆ. ಅವರ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದು ಮಕ್ಕಳ ಪ್ರಯತ್ನಕ್ಕೆಫಲ ದೊರೆತಿದೆ ಎನ್ನುತ್ತಾ ಸಂತಸ ವ್ಯಕ್ತಪಡಿಸುತ್ತಾರೆ ಭಾಗ್ಯಶ್ರೀ ತಂದೆ.