ಅಜ್ಮೀರ್, ಫೆ 29(DaijiworldNews/AA): 1993ರ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ರಾಜಸ್ಥಾನ ಅಜ್ಮೀರ್ ನಲ್ಲಿರುವ ಟಾಡಾ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಇರ್ಫಾನ್ ಹಾಗೂ ಹಮೀದುದ್ದೀನ್ ಅವರನ್ನು ತಪ್ಪಿತಸ್ಥರೆಂದು ನ್ಯಾಯಾಲಯ ಪರಿಗಣಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಭೂಗತ ಪಾತಕಿ ಹಾಗೂ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನ ಸಹಾಯಕನಾಗಿದ್ದ ತುಂಡಾನನ್ನು ಭಾರತ-ನೇಪಾಳ ಗಡಿಯಲ್ಲಿ 2013ರಲ್ಲಿ ಬಂಧಿಸಲಾಗಿತ್ತು. ಈತನ ವಿರುದ್ಧ ಲಕ್ನೋ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈನಲ್ಲಿ ಸ್ಫೋಟಗಳನ್ನು ಆಯೋಜಿಸಿದ ಆರೋಪ, 1992 ರ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ ಮೊದಲ ವರ್ಷದ ದಿನದಂದು ಇಬ್ಬರನ್ನು ಕೊಂದ ಆರೋಪ ಹಾಗೂ ಸರಣಿ ರೈಲು ಬಾಂಬ್ ಸ್ಫೋಟದ ಆರೋಪಗಳಿವೆ.
ಇನ್ನು ತುಂಡಾನನ್ನು 1993ರ ರೈಲು ಸ್ಫೋಟ ಪ್ರಕರಣ ರೂಪಾರಿ ಎಂದು ಸಿಬಿಐ ಪರಿಗಣಿಸಿತ್ತು. 1997ರ ಅವಳಿ ರೋಹ್ಟಕ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಡಾನನ್ನು 2023ರ ಫೆಬ್ರವರಿಯಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹರಿಯಾಣದ ನ್ಯಾಯಾಲಯವು ಖುಲಾಸೆಗೊಳಿಸಿತ್ತು. ಇನ್ನು ಈ ಸ್ಪೋಟದಲ್ಲಿ 8 ಮಂದಿ ಗಾಯಗೊಂಡಿದ್ದರು.