ಕೋಲ್ಕತ್ತಾ,ಏ28(DaijiworldNews/AZM):ಬಿಜೆಪಿಯವರು ತನ್ನನ್ನು ಯಾವಾಗ ಬೇಕಾದರೂ ಕೊಲ್ಲಬಹುದು ಹಾಗೂ ಅದನ್ನು ಅಪಘಾತ ಎಂದು ಬಿಂಬಿಸಬಹುದು ಎಂದು ಬಂಗಾಲ ಸಿಎಂ ಮಮತಾ ಬ್ಯಾನರ್ಜಿಯವರು ಇಂದು ಗಂಭೀರ ಆರೋಪ ಮಾಡಿದ್ದಾರೆ.
ಪೂರ್ವ ಮಿಡ್ನಾಪೂರ್ ಕ್ಷೇತ್ರದ ನಿಂಟೋರಿಯಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಈ ಕುರಿತು ಅವರು ಮಾತನಾಡಿದ್ದಾರೆ. ಯಾವತ್ತು ಬೇಕಾದರೂ ನನ್ನ ಕೊಲೆ ಮಾಡಬಹುದು. ಕೊಲೆ ನಂತರ ಅದು ಅಪಘಾತವೆಂದು ಹೇಳಿಕೊಳ್ಳಬಹುದು. ಇದರಿಂದ ನನಗೆ ಯಾವ ಭಯವೂ ಇಲ್ಲ. ಒಂದು ವೇಳೆ ನನ್ನ ಹತ್ಯೆಯಾದರೆ ನನ್ನ ತಾಯಿ, ತಾಯ್ನೆಲ ಮತ್ತು ನಾಡಿನ ಜನರು ತಿರುಗಿಬೀಳುತ್ತಾರೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಕಂಡ ಅತ್ಯಂತ ಅಪಾಯಕಾರಿ ಪ್ರಧಾನಿ ನರೇಂದ್ರ ಮೋದಿ ಅವರು. ನಾನು ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಮನಮೋಹನ್ ಸಿಂಗ್ ಅವರನ್ನು ನೋಡಿದ್ದೇನೆ. ಆದರೆ, ಇಂಥ ‘ಭದ್ರಲೋಕ್’ ಪ್ರಧಾನಿಯನ್ನು ನಾನೆಂದೂ ಕಂಡಿದ್ದಿಲ್ಲ” ಎಂದು ಮಮತಾ ಪ್ರಧಾನಿ ಮೋದಿಯವರ ವಿರುದ್ಧ ಕಿಡಿಕಾರಿದ್ದಾರೆ.
ಮಮತಾ ಅವರು ಮೋದಿ ಅವರನ್ನು ಭದ್ರಲೋಕ್ ಎಂದು ವ್ಯಂಗ್ಯವಾಗಿ ಕುಟುಕಿದ್ದಾರೆ. ಇನ್ನೂ ಮುಂದುವರಿದ ಅವರು ಎನ್ಆರ್ಸಿ ಯೋಜನೆ ಹೆಸರಲ್ಲಿ ತಮ್ಮನ್ನೆಲ್ಲಾ ಹೊರಗೆ ಹಾಕಲು ಬಿಜೆಪಿಯವರು ಚಿತಾವಣಿ ನಡೆಸುತ್ತಿದ್ದು ಆ ಪಕ್ಷಕ್ಕೆ ತಾವ್ಯಾರೂ ಮತ ಹಾಕಬೇಡಿ ಎಂದು ಕರೆ ನೀಡಿದ್ದಾರೆ.
2018ರ ಮೇ 11ರಂದು ಟಿವಿ ವಾಹಿನಿಯೊಂದರ ಸಂದರ್ಶನದ ವೇಳೆಯೂ ಮಮತಾ ಬ್ಯಾನರ್ಜಿ ಅವರು ತಮ್ಮ ಕೊಲೆ ಸಾಧ್ಯತೆಯನ್ನು ಶಂಕಿಸಿದ್ದರು.