ರಾಂಚಿ, ಮಾ 1(DaijiworldNews/SK): ವಿಕಸಿತ ಭಾರತದ ಕಲ್ಪನೆ ಅಡಿಯಲ್ಲಿ ಜಾರ್ಖಂಡ್ ಅನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಪ್ರಧಾನಿ ಮೋದಿ ಅವರು 35,700 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಈ ಬಗ್ಗೆ ಜಾರ್ಖಂಡ್ ನ ಧನ್ ಬಾದ್ ನ ಸಿಂದ್ರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ನಾವು ಜಾರ್ಖಂಡ್ ಗಾಗಿ ಕಾರ್ಯನಿರ್ವಹಿಸಿದ್ದೇವೆ. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದರ ಜೊತೆಗೆ ಜಾರ್ಖಂಡ್ ಅಭಿವೃದ್ಧಿಗೂ ಹೆಚ್ಚಿನ ಮಟ್ಟದಲ್ಲಿ ಪ್ರಮುಖ್ಯತೆಯನ್ನು ನೀಡುತ್ತಿದ್ದು, ಇದರೊಂದಿಗೆ ಜಾರ್ಖಂಡ್ ನ ಬುಡಕಟ್ಟು ಸಮುದಾಯ, ಬಡವರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಎಲ್ಲಾ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡುತ್ತಿರುವ ಭಾರತ 2023ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಆರ್ಥಿಕ ಪ್ರಗತಿಯಲ್ಲಿ ಶೇ.8.4ರಷ್ಟು ಏರಿಕೆ ಕಂಡಿದೆ. ಈ ಮೂಲಕ ಭಾರತ ದೇಶ ಜಗತ್ತಿನಲ್ಲಿಯೇ ಅತ್ಯಂತ ವೇಗದ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದ್ದಾರೆ.