ಬೆಂಗಳೂರು, ಮಾ 1(DaijiworldNews/ AK): ರಾಮೇಶ್ವರಂ ಕೆಫೆ ಸ್ಫೋಟದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಎನ್.ಐ.ಎ.ಗೆ ತನಿಖೆಯನ್ನು ಒಪ್ಪಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ತುರ್ತಾಗಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧದ ಘಟನೆಯ ಎಫ್.ಎಸ್.ಎಲ್ ವರದಿಯನ್ನು ತಿರುಚಿ ಹಾಕದೆ ಯಥಾವತ್ತಾಗಿ ಜನರ ಮುಂದೆ ಇಡಬೇಕು. ತಪ್ಪಿತಸ್ಥರನ್ನು ಒದ್ದು ಒಳಗೆ ಹಾಕಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ವಿಚಾರದಲ್ಲಿ ಎಫ್ಎಸ್ಎಲ್ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು ಸತ್ಯ ಎಂದು ಎಫ್ಎಸ್ಎಲ್ ವರದಿ ಇವತ್ತು ಬೆಳಿಗ್ಗೆ ಬಂದಿದೆ. ಅದನ್ನು ಮುಚ್ಚಿಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಎಫ್ಎಸ್ಎಲ್ ವರದಿ ತಿದ್ದುಪಡಿ ಮತ್ತೊಂದು ಬೋಗಸ್ ಎಫ್ಎಸ್ಎಲ್ ವರದಿ ಸಿದ್ಧಪಡಿಸಲಾಗುತ್ತಿದೆ ಎಂಬ ಅನುಮಾನ ನಮ್ಮೆಲ್ಲರನ್ನು ಕಾಡುತ್ತಿದೆ ಎಂದು ತಿಳಿಸಿದರು.
ಮೊನ್ನೆ ಪಾಕಿಸ್ತಾನ್ ಜಿಂದಾಬಾದ್ ಎಂಬ ದೇಶದ್ರೋಹಿ ಘಟನೆ ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ರಾಮೇಶ್ವರಂ ಕೆಫೆಯ ಬ್ಲಾಸ್ಟ್ ಸಂಭವಿಸಿದೆ. ಕಾಂಗ್ರೆಸ್ ಪಕ್ಷದ ತುಷ್ಟೀಕರಣದ ರಾಜನೀತಿಗಳಿಂದ, ಅಲ್ಪಸಂಖ್ಯಾತರ ಓಲೈಕೆಯ ನೀತಿಯಿಂದ ರಾಜ್ಯದ ಸುರಕ್ಷತೆಗೆ ಗಂಡಾಂತರ ತಂದಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಒಂದಿಲ್ಲೊಂದು ಘಟನೆಗಳು ನಡೆಯುತ್ತಿವೆ. ಸರಣಿ ಘಟನೆಗಳು ಒಂದಾದ ಮೇಲೆ ಒಂದರಂತೆ ರಾಜ್ಯದಲ್ಲಿ ನಡೆಯುತ್ತ ಬಂದಿವೆ. ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ನಿಂದ ಶುರುವಾದ ಘಟನೆಗಳು ಶಿವಮೊಗ್ಗದಲ್ಲಿ ಟಿಪ್ಪು ಜಯಂತಿ ಮುಖೇನ ಹಿಂದೂಗಳ ಮನೆಗಳಿಗೆ ನುಗ್ಗಿ, ಮನೆಗಳ ಮೇಲೆ ಕಲ್ಲೆಸೆದು, ಹಿಂದೂಗಳನ್ನು ಬೆದರಿಸುವ ಘಟನೆಯೂ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಡೆದಿದೆ ಎಂದು ವಿವರಿಸಿದರು.
ಡಿ.ಜೆ.ಹಳ್ಳಿ- ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರ ವಿರುದ್ಧ ಕೇಸು ಹಾಕಿದ್ದು ಅದನ್ನು ರದ್ದು ಮಾಡುವಂತೆ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರು ಗೃಹ ಸಚಿವರಿಗೆ ಒತ್ತಾಯಿಸಿದ್ದರು. ಮೊನ್ನೆ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆ ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಎಲ್ಲರನ್ನೂ ಕೂಡ ಬೆಚ್ಚಿ ಬೀಳಿಸಿದೆ ಎಂದರು.