ಬೆಂಗಳೂರು, ಮಾ 02 (DaijiworldNews/MS): ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧ ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ. ಎಫ್ಎಸ್ಎಲ್ ನಲ್ಲಿ ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋವನ್ನು ಎಡಿಟ್ ಮಾಡಿ ಸೇರಿಸಲಾಗಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ತಿಳಿದು ಬಂದಿದೆ.
ಫೆ.೨೭ ರಂದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ದಾಖಲಿಸಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ವಾಕ್ಸಮರಕ್ಕೆ ಕಾರಣವಾಗಿತ್ತು. ಘಟನೆ ಸಂಬಂಧ ಪೊಲೀ ಸರು ಕೆಲ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಶಂಕಿತ ವ್ಯಕ್ತಿಗಳ ಧ್ವನಿಯನ್ನು ಪೊಲೀಸರು FSLಗೆ ರವಾನೆ ಮಾಡಿದ್ದರು. ವರದಿ ಬರುತ್ತಿದ್ದಂತೆಯೇ ವಿಪಕ್ಷಗಳು ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದವು. ಘೋಷಣೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡುತ್ತಿದ್ದಂತೆಯೇ ನಾಸಿರ್ ಹುಸೇನ್ ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ವಿಧಾನಸೌಧ ಠಾಣೆ ಪೊಲೀಸರು ಈವರೆಗೆ 7 ಮಂದಿಯ ವಿಚಾರಣೆ ನಡೆಸಿದ್ದಾರೆ. ಮೂವರ ವಾಯ್ಸ್ ಸ್ಯಾಂಪಲ್ FSLಗೆ ರವಾನಿಸಿದ್ದಾರೆ. ವಿಚಾರಣೆಗೆ ಒಳಪಟ್ಟ ಎಲ್ಲರೂ ಪಾಕ್ ಪರ ಘೋಷಣೆ ಕೂಗಿಲ್ಲವೆಂದು ಹೇಳಿಕೆ ನೀಡಿದ್ದಾರೆ. ಪೊಲೀಸರು 26 ಮಂದಿಯ ಪಟ್ಟಿ ಮಾಡಿದ್ದು, ಇನ್ನೂ 19 ಜನರ ವಿಚಾರಣೆ ನಡೆಯುತ್ತಿದೆ. ಎಫ್ ಎಸ್ ಎಲ್ ನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಬಂಧನ ಮಾಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.