ಉತ್ತರ ಪ್ರದೇಶ, ಮಾ 02(DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಅದರಲ್ಲೂ ನೃತ್ಯ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಪರೀಕ್ಷೆ ಬರೆಯಲು ತಯಾರಿರುವುದಿಲ್ಲ. ಆದರೆ ಇನ್ನೊಬ್ಬರು ನೃತ್ಯ, ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿ ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಸೌಮ್ಯ ಪಾಂಡೆ ಯಶೋಗಾಥೆ
ಸೌಮ್ಯ ಪಾಂಡೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಪೂರ್ಣಗೊಳಿಸಿ ನಂತರ 2015 ರಲ್ಲಿ ಅವರು MNNIT ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಶಾಖೆಯಲ್ಲಿ B.Tech ಮಾಡಿದರು.
ಇನ್ನು ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ಆಕಾಂಕ್ಷೆ ಹೊಂದಿದ್ದ ಸೌಮ್ಯ ಪಾಂಡೆ ಅವರು ಇಂಜಿನಿಯರಿಂಗ್ ಮುಗಿಸಿ ಒಂದು ವರ್ಷ ಬಿಡುವು ಮಾಡಿಕೊಂಡು ಪರೀಕ್ಷ್ರೆ ಬರೆಯಲು ತಯಾರಿಯನ್ನು ನಡೆಸಿದರು.
2016 ರಲ್ಲಿ ಪರೀಕ್ಷೆ ಬರೆಯಲು ಸಿದ್ದರಾದ ಸೌಮ್ಯ ಅವರು 23 ನೇ ವಯಸ್ಸಿನಲ್ಲಿ ಮೊದಲ ಯತ್ನದಲ್ಲೇ 4 ನೇ ರ್ಯಾಂಕ್ ನೊಂದಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇನ್ನು ಸೌಮ್ಯ ಅವರು ಕಲಿಕೆಯಲ್ಲಿ ಮಾತ್ರವಲ್ಲದೇ ಶಾಸ್ತ್ರೀಯ ನೃತ್ಯದಲ್ಲೂ ಅದ್ಬುತ ಸಾಧನೆ ಮಾಡುವುದರ ಜೊತೆಗೆ ಬ್ಯಾಸ್ಕೆಟ್ ಬಾಲ್ ನ ಅತ್ಯುತ್ತಮ ಆಟಗಾರ್ತಿಯೂ ಹೌದು.
ಇನ್ನು ಐಎಎಸ್ ಸೌಮ್ಯಾ ಪಾಂಡೆ ಪ್ರಸ್ತುತ ಕಾನ್ಪುರ ದೇಹತ್ ನಲ್ಲಿ ಸಿಡಿಒ ಆಗಿ ನೇಮಕಗೊಂಡಿದ್ದಾರೆ. 2020 ರಲ್ಲಿ, ಅವರು ತಮ್ಮ ಮಗಳಿಗೆ ಜನ್ಮ ನೀಡಿದ 22 ನೇ ದಿನದಂದು ಕಚೇರಿಗೆ ಹಾಜರಾಗಿದ್ದರು. ವಾಸ್ತವವಾಗಿ, ಆ ಸಮಯದಲ್ಲಿ ಕೋವಿಡ್ ಕಾರಣದಿಂದಾಗಿ ಪರಿಸ್ಥಿತಿ ಹದಗೆಡುತ್ತಿತ್ತು. ಅಂತಹ ಪರಿಸ್ಥಿತಿಯಲ್ಲೂ ಅವರು ಹೆರಿಗೆ ರಜೆ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದರು.