ಬೆಂಗಳೂರು, ಮಾ 02 (DaijiworldNews/MS): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಂದೆಡೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿಟಿವಿಯಲ್ಲಿ ಶಂಕಿತ ಆರೋಪಿಯ ಚಹರೆ, ಚಲನವಲನ ದೃಶ್ಯ ಸೆರೆಯಾಗಿದೆ.
ತಲೆ ಮೇಲೆ ಹ್ಯಾಟ್ ಹಾಕಿಕೊಂಡಿರುವ ಶಂಕಿತ ವ್ಯಕ್ತಿಯೇ ಬಾಂಬ್ ಇಟ್ಟಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿ ಹಾಕಿರುವ ಬಿಳಿ ಬಣ್ಣದ ಹ್ಯಾಟ್ ಮೇಲೆ ನಂಬರ್ 10 ಎಂದು ನಮೂದಿಸಲಾಗಿದೆ. ಸದ್ಯ ಆರೋಪಿಗಾಗಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
11:35ರ ವೇಳೆ ಹೋಟೆಲ್ಗೆ ಕಪ್ಪು ಬಣ್ಣದ ಬ್ಯಾಗ್ ಜೊತೆ ಬಾಂಬರ್ ಆಗಮಿಸಿದ್ದು, ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್ ಖರೀದಿಸಿ 11:42ರ ವೇಳೆಗೆ ಇಡ್ಲಿ ತಿಂದು, ಕೈ ತೊಳೆಯುವ ಜಾಗಕ್ಕೆ ಬಂದಿದ್ದಾನೆ. 11:44ರ ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ವಾಚ್ನಲ್ಲಿ ಟೈಂ ನೋಡುತ್ತಾ ಕೆಫೆಯಿಂದ ಹೊರಗೆ ಬಂದು ಎಡಭಾಗಕ್ಕೆ ಪರಾರಿಯಾಗಿದ್ದಾನೆ.12:55ರ ವೇಳೆಗೆ ಬಾಂಬ್ ಸ್ಫೋಟವಾಗಿದೆ.
ಆರೋಪಿ ಕಪ್ಪು ಬಣ್ಣದ ಮಾಸ್ಕ್ ಹಾಕಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಫೆಯಲ್ಲಿ ತಿಂಡಿಯ ಪ್ಲೇಟ್ ಹಿಡಿದು ಓಡಾಡಿರುವ ದೃಶ್ಯ ಸೆರೆಯಾಗಿದೆ. ಹೋಗುತ್ತಾ ವಾಚ್ನಲ್ಲಿ ಟೈಂ ನೋಡಿ ಹೋಗಿದ್ದು ಕೆಫೆಯಿಂದ ಹೊರಗೆ ಬಂದು ಎಡಭಾಗಕ್ಕೆ ಹೋಗಿದ್ದಾನೆ.