ನವದೆಹಲಿ, ಮಾ 02(DaijiworldNews/AA): ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ವಿವರವಾದ ಅಧ್ಯಯನ ನಡೆಸಿದೆ. ವ್ಯಕ್ತಿಯ ಜೀವನಶೈಲಿ ಹಾಗೂ ಅತಿಯಾದ ಮದ್ಯಪಾನದಂತಹ ಅಂಶಗಳು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೋವಿಡ್ ಲಸಿಕೆಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನವಾಗುತ್ತಿದೆ. ಇಂದು ಯಾವ ವ್ಯಕ್ತಿಗಾದರೂ ಪಾರ್ಶ್ವವಾಯು ಬಂದರೆ, ಅದು ಕೋವಿಡ್ ಲಸಿಕೆ ಇಂದ ಎಂದು ಭಾವಿಸುತ್ತಾರೆ. ಈ ಬಗ್ಗೆ ಐಸಿಎಂಆರ್ ವಿಸ್ತೃತ ಅಧ್ಯಯನ ನಡೆಸಿದ್ದು, ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ. ಹೃದಯಾಘಾತಕ್ಕೆ ನಮ್ಮ ಜೀವನಶೈಲಿ, ತಂಬಾಕು ಮತ್ತು ಅತಿಯಾದ ಮದ್ಯ ಸೇವನೆಯಂತಹ ಹಲವಾರು ಅಂಶಗಳು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ತಪ್ಪು ಮಾಹಿತಿ ಇಂದಾಗಿ ನಮ್ಮಲ್ಲಿ ತಪ್ಪು ಅಭಿಪ್ರಾಯ ರೂಪುಗೊಳ್ಳುತ್ತದೆ. ಆದರೆ ನಮ್ಮ ನಿರ್ಧಾರವು ವೈಜ್ಞಾನಿಕ ಸಂಶೋಧನೆ ಹಾಗೂ ಡೇಟಾ ಆಧಾರಿತವಾಗಿರಬೇಕು ಎಂದು ತಿಳಿಸಿದರು.
ಭಾರತದ ಆರೋಗ್ಯ ಕ್ಷೇತ್ರವನ್ನು ನ್ಯಾವಿಗೇಟ್ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಮಗ್ರ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದ ಜನರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಲಭಿಸುತ್ತದೆ. ಪ್ರಪಂಚದ ಸುಮಾರು 150 ದೇಶಗಳಿಗೆ ಕೋವಿಡ್ ಲಸಿಕೆ ಪೂರೈಸುವಲ್ಲಿ ಭಾರತ ಅಪಾರ ಶ್ರಮ ವಹಿಸಿದೆ. ಹಾಗೂ ಲಸಿಕೆ ಪೂರೈಸುವ ಮೂಲಕ ಭಾರತ ಅಪಾರ ಅಭಿಮಾನವನ್ನು ಗಳಿಸಿದೆ ಎಂದು ಅವರು ಹೇಳಿದರು.