ರಾಮನಗರ, ಮಾ 02(DaijiworldNews/AA): ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡ ಬಳಿಕ ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಬದಲು ಮೈತ್ರಿ ಪಕ್ಷದ ಬಗ್ಗೆಯೇ ಅತಿಯಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಹೆಚ್ಡಿಕೆ ಅವರನ್ನು ತಮ್ಮ ಪಕ್ಷದ ವಕ್ತಾರರನ್ನಾಗಿ ನೇಮಿಸಿಕೊಂಡಿದೆ. ಜೆಡಿಎಸ್ ಪಕ್ಷ ಈಗ ಇಲ್ಲವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.
ರಾಮನಗರದ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಹೊರತಾಗಿ ಜೆಡಿಎಸ್ ಪಕ್ಷವನ್ನು ಬಲಪಡಿಸಿ ಎಂದು ಹೇಳುತ್ತಿಲ್ಲ. ತೆನೆ ಹೊತ್ತ ಮಹಿಳೆ ಅದನ್ನು ಬಿಸಾಕಿ ಹೋಗುವಂತೆ ಬಿಜೆಪಿ ಪಕ್ಷದವರು ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನು ಮುಂಬರುವ ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ಪರಿಸ್ಥಿತಿ ಏನಾಗುತ್ತದೆ ಎಂದು ಹೆಚ್ಡಿಕೆ ಅವರೇ ಹೇಳಬೇಕು. ದೇವೇಗೌಡರು ಕಷ್ಟಪಟ್ಟು ಕಟ್ಟಿದ ಪಕ್ಷದ ಸ್ಥಿತಿ ಕಂಡು ನನಗೆ ನೋವಾಗುತ್ತದೆ. ನಾವು, ಜೆಡಿಎಸ್ ಪಕ್ಷದವರು ಜಗಳವಾಡುತ್ತಿದ್ದೇವೆ. ಹೊರತಾಗಿ ನಾವು ಬಿಜೆಪಿಯವರಲ್ಲ. ಜೆಡಿಎಸ್ ನ ಇಂದಿನ ಸ್ಥಿತಿ ಕಂಡು ವ್ಯಥೆಯಾಗುತ್ತಿದೆ’ ಎಂದು ಹೇಳಿದರು.