ನವದೆಹಲಿ, ಮಾ 03(DaijiworldNews/AA): ರಾಷ್ಟ್ರೀಯ ಲೋಕ ದಳ(ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಸಿಂಗ್ ಅವರು ಇಂಡಿಯಾ ಮೈತ್ರಿಕೂಟ ತೊರೆದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಜಯಂತ್ ಸಿಂಗ್ ಅವರು ಎನ್ಡಿಎಗೆ ಸೇರ್ಪಡೆಗೊಂಡ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಎನ್ಡಿಎಗೆ ಸೇರ್ಪಡೆಗೊಂಡ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಣಯ ತೆಗೆದುಕೊಂಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಎರಡು ಸ್ಥಾನಗಳಲ್ಲಿ ಆರ್ಎಲ್ಡಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಜಯಂತ್ ಸಿಂಗ್ ಅವರ ತಾತ ಮಾಜಿ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿತ್ತು. ಈ ಹಿನ್ನೆಲೆ ಕೇಂದ್ರ ಸರ್ಕಾರವನ್ನ ಜಯಂತ್ ಸಿಂಗ್ ಅವರು ಶ್ಲಾಘಿಸಿದ್ದರು. ಇದರ ಬೆನ್ನಲ್ಲೇ ಜಯಂತ್ ಸಿಂಗ್ ಅವರು ಎನ್ಡಿಎ ಬಣವನ್ನ ಸೇರುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿದ್ದವು.