ಕಾನ್ಕೇರ್, ಮಾ 03(DaijiworldNews/AA): ಎನ್ಕೌಂಟರ್ನಲ್ಲಿ ಓರ್ವ ಪೊಲೀಸ್ ಕಾನ್ಸ್ಟೇಬಲ್ ಮತ್ತು ಒಬ್ಬ ನಕ್ಸಲ್ ಮೃತಪಟ್ಟ ಘಟನೆ ಛತ್ತೀಸಗಢದ ಕಾನ್ಕೇರ್ ಜಿಲ್ಲೆಯಲ್ಲಿ ಇಂದು ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಛೋಟೇಬೆತಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಿದೂರ್ ಗ್ರಾಮದ ಅರಣ್ಯದಲ್ಲಿ ನಕ್ಸಲ್ ನಿಗ್ರಹ ಆಪರೇಷನ್ ವೇಳೆ ಗುಂಡಿನ ಚಕಮಕಿ ನಡೆದಿದೆ. ಹಿದೂರ್ ಕಾಡಿನಲ್ಲಿ ನಕ್ಸಲರು ಬೀಡು ಬಿಟ್ಟಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ರಾಜ್ಯ ಪೊಲೀಸ್ನ ಬಾಸ್ಟರ್ ಫೈಟರ್ ವಿಭಾಗಕ್ಕೆ ಸೇರಿದ ಕಾನ್ಸ್ಟೇಬಲ್ ರಮೇಶ್ ಕುರೇತಿ ಅವರು ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಓರ್ವ ನಕ್ಸಲ್ನ ಮೃತದೇಹ ಹಾಗೂ ಎಕೆ–47 ಗನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಈ ಬಗ್ಗೆ ಶೋಧ ಮುಂದುವರಿದಿದೆ ಎಂದು ತಿಳಿದುಬಂದಿದೆ.