ತೆಲಂಗಾಣ,ಮಾ 05(DaijiworlNews/AK): ವಿರೋಧಿಗಳಿಗೆ ಕುಟುಂಬ ಮೊದಲು ನನಗೆ ದೇಶವೇ ಮೊದಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉಜ್ಜೈನಿ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಂಗಾರೆಡ್ಡಿಯಲ್ಲಿ 7200 ಕೋಟಿ ರೂ.ಗಳ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಿದರು.
ಬಳಿಕ ಮಾತನಾಡಿ ಅವರು, ಸ್ವಜನಪಕ್ಷಪಾತವು ಯುವಕರಿಂದ ಅವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂದು ನಾನು ಹೇಳಿದಾಗ ವಿರೋಧಪಕ್ಷಗಳು ಪ್ರತಿಕ್ರಿಯಿಸಲಿಲ್ಲ. ವಿರೋಧಿಗಳಿಗೆ ಕುಟುಂಬವೇ ಮೊದಲು, ಮೋದಿಗೆ ರಾಷ್ಟ್ರವೇ ಮೊದಲು ಎಂದು ಹೇಳಿದರು.
ನಾನು ಯುವಕರನ್ನು ದೇಶದ ರಾಜಕೀಯದಲ್ಲಿ ಮುಂದೆ ತರಲು ಬಯಸುತ್ತೇನೆ. ಕುಟುಂಬವಾದವು ದೇಶವನ್ನು ಲೂಟಿ ಮಾಡಿದೆ, ಕುಟುಂಬ ಸದಸ್ಯರು ದುಬಾರಿ ಉಡುಗೊರೆಗಳ ಮೂಲಕ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ. ಆದರೆ ನಾನು ಪಡೆದ ಉಡುಗೊರೆಗಳನ್ನು ಹರಾಜು ಹಾಕಲಾಯಿತು ಮತ್ತು ಸರ್ಕಾರಿ ಖಜಾನೆಯಲ್ಲಿ ಅಥವಾ ಗಂಗಾ ಮಾತೆಯ ಸೇವೆಗೆ ಬಳಸಲಾಯಿತು ಎಂದು ಹೇಳಿದರು.
ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ ಅವರಿಗೆ ಪರಿವಾರವಿಲ್ಲ, ಹಿಂದೂಗಳು ತಾಯಿ ತೀರಿಕೊಂಡಾಗ ಕೇಶಮುಂಡನ ಮಾಡಿಕೊಳ್ಳುತ್ತಾರೆ, ಆದರೆ ನಿಮ್ಮ ತಾಯಿ ಸತ್ತಾಗ ಯಾಕೆ ಮಾಡಿಸಿಕೊಂಡಿಲ್ಲ, ಪರಿವಾರವಾದ, ಕುಟುಂಬ ರಾಜಕಾರಣವನ್ನು ಮೋದಿ ಟೀಕಿಸುತ್ತಾರೆ ಯಾಕೆಂದರೆ ಮೋದಿಗೆ ಮಕ್ಕಳಿಲ್ಲ, ನಿಮ್ಮ ಬಳಿ ಪರಿವಾರವಿಲ್ಲ ಯಾಕೆಂದರೆ ನೀವು ಹಿಂದುವೇ ಅಲ್ಲ ಎಂದು ಹೇಳಿದ್ದರು.