ಬೆಂಗಳೂರು, ಮಾ 09 (DaijiworldNews/MS): ಕರಾವಳಿ ಸೇರಿದಂತೆ ರಾಜ್ಯದಲ್ಲಿ ಅಡಿಕೆ ಕೊಯ್ಲು ಮುಗಿಯುತ್ತಾ ಬಂದಿದ್ದು ,ಅದರ ಮಾರಾಟಕ್ಕೆ ಸಿದ್ದವಾಗುತ್ತಿದ್ದಂತೆಯೇ ಅಡಕೆ ಬೆಳೆಗಾರರಿಗೆ ದರ ಕುಸಿತದ ಆತಂಕ ಎದುರಾಗಿದೆ. ಶ್ರೀಲಂಕಾದಿಂದ ಭರ್ಜರಿ 5 ಲಕ್ಷ ಟನ್ ಅಡಕೆಯನ್ನು ಆಮದು ಮಾಡಿಕೊಳ್ಳಲು ಕಂಪನಿಯೊಂದು ಮುಂದಾಗಿದೆ.
ಶ್ರೀಲಂಕಾದಿಂದ ಅಡಿಕೆ ಆಮದು ಸಂಬಂಧ ಬ್ರಿಟನ್ ಮೂಲದ ಎಸ್ರಾಂ ಅಂಡ್ ಎಂರಾಂ ಗ್ರೂಪ್ ಒಪ್ಪಂದ ಮಾಡಿಕೊಂಡಿದೆ. ಶ್ರೀಲಂಕಾ ಮೂಲದ ವ್ಯಾಪಾರಿ ಸಂಸ್ಥೆ ಪ್ರೈಮ್ ಸ್ಟಾರ್ ಪ್ರೈವೇಟ್ ಲಿಮಿಟೆಡ್ ಜತೆ ಅಡಕೆ ಆಮದು ಒಪ್ಪಂದ ಮಾಡಿಕೊಂಡಿರುವುದಾಗಿ ಎಸ್ರಾಂ ಅಂಡ್ ಎಂರಾಂ ಗ್ರೂಪ್ ಶುಕ್ರವಾರ ತಿಳಿಸಿದೆ.
2022ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತ 53.71 ಕೋಟಿ ರೂ. ಮೌಲ್ಯದ ಅಡಿಕೆ ಆಮದು ಮಾಡಿಕೊಂಡಿತ್ತು. ಆದರೆ 2023ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಇದು 4.04 ಕೋಟಿ ರೂ.ಗೆ ಕುಸಿದಿತ್ತು. ಇಂಡೋನೇಷ್ಯಾ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಿಂದ ಭಾರತ ಅಡಿಕೆ ಆಮದು ಮಾಡಿಕೊಳ್ಳುತ್ತದೆ.
ಇದೀಗ ಲಂಕಾದಿಂದ ಭಾರಿ ಪ್ರಮಾಣದಲ್ಲಿ ಆಮದಿಗೆ ಬ್ರಿಟನ್ ಕಂಪನಿ ಮುಂದಾಗಿರುವುದರಿಂದ ಸಹಜವಾಗಿಯೇ ಅಡಕೆ ಬೆಳೆಗಾರರು ಕಂಗಾಲಾಗುವಂತಾಗಿದೆ.