ದೆಹಲಿ, ಮಾ 09 (DaijiworldNews/ AK):ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ವೇಳೆ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ.
2027ರವರೆಗೆ ಅರುಣ್ ಗೋಯಲ್ ಅವರ ಅಧಿಕಾರಾವಧಿ. ಇದೀಗ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ.
ಇತ್ತ ಗೋಯಲ್ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ. ಮುಂದಿನ ವಾರ ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ. ಆದರೆ ಗೋಯಲ್ ಅವರ ರಾಜೀನಾಮೆಯಿಂದ ಚುನಾವಣಾ ದಿನಾಂಕ ಘೋಷಣೆ ಮತ್ತಷ್ಟು ಮುಂದೆ ಹೋಗಬಹುದು ಎಂದು ವರದಿಯಾಗಿದೆ.
ಅರುಣ್ ಗೋಯಲ್ ಅವರು ಪಂಜಾಬ್ ಕೇಡರ್ನಲ್ಲಿ 1985ರ ಬ್ಯಾಚ್ನ ಐಎಎಸ್ ಅಧಿಕಾರಿ ಆಗಿದ್ದರು. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದರು. ಬಳಿಕ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು. ಆದರೆ ಅರುಣ್ ಗೋಯಲ್ರ ನೇಮಕವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.