ಭೋಪಾಲ್, ಮಾ 11 (DajiworldNews/AA): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ’ಗಾಮಿನಿ’ ಎಂಬ ಚೀತಾ 5 ಮರಿಗಳಿಗೆ ಭಾನುವಾರ ಜನ್ಮ ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಭೂಪೇಂದರ್ ಯಾದವ್ ಅವರು, ’ಹೈ ಫೈವ್, ಕುನೋ! ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ಮೀಸಲು ಪ್ರದೇಶದಿಂದ ತರಲಾಗಿದ್ದ ಸುಮಾರು 5 ವರ್ಷದ ಹೆಣ್ಣು ಚೀತಾ ಗಾಮಿನಿ 5 ಮರಿಗಳಿಗೆ ಜನ್ಮ ನೀಡಿದೆ. ಇದೀಗ ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ 13 ಆಗಿದೆ. ಈ ಮೂಲಕ ದೇಶದ ಒಟ್ಟು ಚೀತಾಗಳ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
’ಚೀತಾಗಳಿಗೆ ಒತ್ತಡ ರಹಿತ ವಾತಾವರಣ ಒದಗಿಸಿದ ಅರಣ್ಯಾಧಿಕಾರಿಗಳಿಗೆ, ಪಶುವೈದ್ಯರಿಗೆ ಮತ್ತು ಕ್ಷೇತ್ರ ಸಿಬ್ಬಂದಿಯ ತಂಡ ಸೇರಿ ಎಲ್ಲರಿಗೂ ಅಭಿನಂದನೆಗಳು. ಈ ವಾತಾವರಣವು ಯಶಸ್ವಿ ಮರಿಗಳ ಜನನಕ್ಕೆ ಕಾರಣವಾಗಿದೆ. ಗಾಮಿನಿಯ ಪರಂಪರೆ ಮುಂದುವರೆಯುತ್ತಿದ್ದು, ಅದು ತನ್ನ ಮುದ್ದಾದ ಮರಿಗಳನ್ನು ಎಲ್ಲರಿಗೂ ಪರಿಚಯಿಸುತ್ತಿದೆ’ ಎಂದು ವಿಡಿಯೋ ಸಹಿತ ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.