ಅಯೋಧ್ಯೆ, ಮಾ 11 (DajiworldNews/AA): ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ಲೋಕಾರ್ಪಣೆಗೊಂಡ ಮರುದಿನದಿಂದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭವಾದ 48 ದಿನಗಳ ಮಂಡಲೋತ್ಸವ ಭಾನುವಾರ ಸಂಪನ್ನಗೊಂಡಿದೆ.
ಭಾನುವಾರ ಮಂಡಲೋತ್ಸವದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ವೈಭವದಿಂದ 1008 ಕಲಶಾಭಿಷೇಕ ಸಹಿತ ಬ್ರಹ್ಮಕಲಶೋತ್ಸವ ನೆರವೇರಿತು. ಬೆಳಿಗ್ಗೆಯಿಂದಲೇ ನೂರಾರು ಋತ್ವಿಜರ ಉಪಸ್ಥಿತಿಯಲ್ಲಿ ತತ್ವ ಹೋಮ ಸಹಿತ ವಿವಿಧ ಹೋಮ ಹವನಾದಿಗಳು, ಕಲಶ ಸ್ಥಾಪನಾ ಪೂರ್ವ ಕಲಶ ಪೂಜೆ ವಿಧಿ ವಿಧಾನಗಳು ನಡೆಯಿತು. ಶ್ರೀರಾಮನ ಬ್ರಹ್ಮಕಲಶೋತ್ಸವ ನಿಮಿತ್ತ ಇಡೀ ರಾಮಮಂದಿರವನ್ನು ಆಕರ್ಷಕ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಮಂದಿರಕ್ಕೆ ಅಸಂಖ್ಯಾತ ಭಕ್ತರು ಆಗಮಿಸಿ ಬಾಲರಾಮನ ದರ್ಶನ ಪಡೆದರು. ಇನ್ನು ಪವಿತ್ರ ಕಲಶಾಭಿಷೇಕಕ್ಕೆ ಶ್ರೀಗಳು ಸರಯೂ ಮಾತ್ರವಲ್ಲದೇ ಗಂಗಾ ಅಲಕನಂದಾ ಸಹಿತ ಅನೇಕ ನದಿಗಳ ಪವಿತ್ರ ಜಲವನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ೪೮ ದಿನಗಳ ಅದ್ಧೂರಿ ಮಂಡಲೋತ್ಸವಕ್ಕೆ ತೆರೆ ಬಿದ್ದಿದೆ. ಅಷ್ಟೇ ಅಲ್ಲದೇ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ನಡೆಯಲಿರುವ ಮೊದಲ ರಾಮನವಮಿಗೆ ಮಂದಿರದಲ್ಲಿ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ.