ನವದೆಹಲಿ, ಮಾ 11(DaijiworldNews/MS): ದೇಶವು ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿರುವಂತೆಯೇ ಕೇಂದ್ರ ಸರ್ಕಾರವು "ಪೌರತ್ವ ತಿದ್ದುಪಡಿ ಕಾಯ್ದೆ"ಯನ್ನು ಜಾರಿಗೊಳಿಸಲು ಮುಂದಾಗಿದ್ದು, ಕೇಂದ್ರ ಗೃಹ ಸಚಿವಾಲಯ ಪೌರತ್ವ ತಿದ್ದುಪಡಿ ಕಾಯ್ದೆ(CAA)-2019 ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ.
ಈಗಾಗಲೇ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನ ಎರಡೂ ಸದನಗಳು ಅಂಗೀಕಾರ ನೀಡಿದ್ದು, ರಾಷ್ಟ್ರಪತಿಯವರು ಅಂಕಿತ ಹಾಕಿದ ಕಾರಣ ವಿಧೇಯಕವು ಕಾಯ್ದೆಯಾಗಿ ಬದಲಾಗಿದೆ.
2019ರಲ್ಲೇ ಸಿಎಎ ತಿದ್ದುಪಡಿ ಜಾರಿಯಾದರೂ ನಿಯಮಗಳ ಅಧಿಸೂಚನೆ ಹೊರಡಿಸಿರಲಿಲ್ಲ. ಈ ಕಾಯ್ದೆಯ ಅನ್ವಯ ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರು ಡಿಸೆಂಬರ್ 31, 2014 ರಂದು ಅಥವಾ ಮೊದಲು ಭಾರತಕ್ಕೆ ಪ್ರವೇಶಿಸಿದ್ದರೆ ಅವರಿಗೆ ಭಾರತೀಯ ಪೌರತ್ವವನ್ನು ಒದಗಿಸುವ ಅವಕಾಶವನ್ನು ಈ ಸಿಎಎ ಒದಗಿಸುತ್ತದೆ. ಈ ಮೂರು ದೇಶಗಳು ಸೇರಿದಂತೆ ಯಾವುದೇ ದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರು ಸೇರಿದಂತೆ ಬೇರೆ ಯಾವುದೇ ವಿದೇಶಿಯರಿಗೆ ಇದು ಅನ್ವಯಿಸುವುದಿಲ್ಲ. ಆದರೆ, ಸಿಎಎ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿಯಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿದ ಕಾರಣ ಹಲವಾರು ಜನ ಮೃತಪಟ್ಟಿದ್ದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಎಂದಿಗೂ ಭಾರತೀಯ ಪೌರತ್ವವನ್ನು ಪಡೆಯಲು ಸಾಧ್ಯವಿಲ್ಲ ಎಂಬರ್ಥವಲ್ಲ
್ಅಲ್ಲ. ನ್ಯಾಚುರಲೈಸೇಶನ್ (ನೈಸರ್ಗೀಕರಣ - ಪೌರತ್ವ ಕಾಯ್ದೆಯ ಸೆಕ್ಷನ್ 6) ಅಥವಾ ನೋಂದಣಿ (ಕಾಯಿದೆಯ ಸೆಕ್ಷನ್ 5) ಮೂಲಕ ಯಾವುದೇ ವರ್ಗದ ಯಾವುದೇ ವಿದೇಶಿಯರು ಭಾರತೀಯ ಪೌರತ್ವವನ್ನು ಪಡೆದುಕೊಳ್ಳಲು ಹಾಲಿ ಕಾನೂನು ಅವಕಾಶ ನೀಡುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆ ಅಡಿ ಪೌರತ್ವ ನೋಂದಣಿಗೆ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.