ಹಾವೇರಿ, ಮಾ 11 (DajiworldNews/AK): ಬ್ಯಾಡಗಿ ಮೆಣಸಿನಕಾಯಿ ದರ ದಿಢೀರ್ ಕುಸಿತದಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ನಿಯಂತ್ರಣಕ್ಕೆ ಮುಂದಾದ ಪೊಲೀಸರನ್ನೇ ರೈತರು ಓಡಿಸಿದ್ದಾರೆ.
ಬ್ಯಾಡಗಿಯ ಆಡಳಿತ ಕಚೇರಿಯ ಮುಂದೆ ರೈತರು ನಿನ್ನೆಯಿಂದ (ಸೋಮವಾರ) ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಗಾಜು, ಪೀಠೋಪಕರಣ ಧ್ವಂಸ ಮಾಡಿದ್ದಾರೆ. ಅಲ್ಲದೇ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.ಪ್ರತಿಭಟನೆ ತಡೆಯಲು ಬಂದ ಪೊಲೀಸರನ್ನೇ ರೈತರು ಓಡಿಸಿದ್ದಾರೆ.
ಆಡಳಿತದ ಕಚೇರಿ ಬಳಿ ಬಂದ 15 ಕ್ಕೂ ಅಧಿಕ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲಾಗದೇ ಸ್ಥಳದಿಂದ ಓಡುತ್ತಿರುವ ದೃಶ್ಯದ ವೀಡಿಯೋ ವೈರಲ್ ಆಗಿದೆ.
ಕೈಯಲ್ಲಿ ದೊಣ್ಣೆ ಹಿಡಿದು ಪ್ರತಿಭಟನಾಕಾರರು ಪೊಲೀಸರನ್ನು ಓಡಿಸಿದ್ದಾರೆ. ತಮಗೆ ಅಪಾಯ ಆಗಬಹುದೆಂಬ ಭೀತಿಯಿಂದ ಪೊಲೀಸರು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯವಾಗಿದೆ ಎನ್ನಲಾಗಿದೆ. ಮೆಣಸಿನಕಾಯಿ ಬೆಲೆ ಸೋಮವಾರ ಕ್ವಿಂಟಲ್ಗೆ 20,000 ರೂ.ನಿಂದ 8,000 ರೂ.ಗೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.ಬೆಲೆ ಘೋಷಣೆಯಾದ ತಕ್ಷಣ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.