ಚಂಡೀಗಢ, ಮಾ 12(DaijiworldNews/AK):ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಬೆಳಗ್ಗೆ ಮನೋಹರ್ ಲಾಲ್ ಖಟ್ಟರ್ ಮತ್ತು ಸಚಿವ ಸಂಪುಟವು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿತ್ತು.
ಇದೀಗ ಖಟ್ಟರ್ ಮತ್ತು ಹರಿಯಾಣದ ಉಸ್ತುವಾರಿ ಬಿಪ್ಲಬ್ ದೇವ್ ಅವರ ಸಮ್ಮುಖದಲ್ಲಿ ನಯಾಬ್ ಸಿಂಗ್ ಸೈನಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಹರಿಯಾಣದಲ್ಲಿ ಬಿಜೆಪಿ-ಜನನಾಯಕ ಜನತಾ ಪಕ್ಷ (JJP)ಯ ಆಡಳಿತ ಸಮ್ಮಿಶ್ರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮನೋಹರ್ ಲಾಲ್ ಖಟ್ಟರ್ ಅವರು ಎಲ್ಲಾ ಸಚಿವರು ರಾಜೀನಾಮೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುರುಕ್ಷೇತ್ರವನ್ನು ಪ್ರತಿನಿಧಿಸುವ ಸಂಸದ ಮತ್ತು ಒಬಿಸಿ ಸಮುದಾಯದ ಸದಸ್ಯರಾಗಿರುವ 54 ವರ್ಷದ ನಯಾಬ್ ಸಿಂಗ್ ಸೈನಿಯವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಬಿಜೆಪಿಯ ಹರಿಯಾಣ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಮನೋಹರ್ ಲಾಲ್ ಖಟ್ಟರ್ ಅವರ ವಿಶ್ವಾಸಾರ್ಹ ಮಿತ್ರ ಎಂದು ಕರೆಯಲ್ಪಡುವ ಸೈನಿ ಅವರು 2014 ರಲ್ಲಿ ಶಾಸಕರಾದ ನಂತರ ಹರಿಯಾಣ ರಾಜಕೀಯದಲ್ಲಿ ಗಟ್ಟಿಯಾದ ಅಸ್ತಿತ್ವವನ್ನು ಹೊಂದಿದ್ದಾರೆ. ಸೈನಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಕೂಡ ಆಗಿದ್ದರು.