ಚಂಡೀಗಢ, ಮಾ 13(DaijiworldNews/AA): ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ.
ಜನನಾಯಕ ಜನತಾ ಪಕ್ಷ (ಜೆಜೆಪಿ) ವಿಶ್ವಾಸ ಮತಯಾಚನೆಯ ವೇಳೆ ಸದನಕ್ಕೆ ಗೈರುಹಾಜರಾಗುವಂತೆ ತನ್ನ ಪಕ್ಷದ 10 ಶಾಸಕರಿಗೆ ವಿಪ್ ಜಾರಿಗೊಳಿಸಿತ್ತು. ಬಳಿಕ ವಿಶ್ವಾಸಮತಯಾಚನೆ ಪ್ರಾರಂಭವಾಗುತ್ತಿದ್ದಂತೆ ಜೆಜೆಪಿ ಪಕ್ಷದ 5 ಶಾಸಕರು ಸದನದಿಂದ ಹೊರನಡೆದಿದ್ದರು.
90 ಸದಸ್ಯರಿರುವ ರಾಜ್ಯ ವಿಧಾನಸಭೆಯಲ್ಲಿ, ಬಿಜೆಪಿ ಪಕ್ಷವು 41 ಶಾಸಕರನ್ನು ಹೊಂದಿದೆ. ಹಾಗೂ 7 ಪಕ್ಷೇತರ ಶಾಸಕರಲ್ಲಿ 6 ಮತ್ತು ಹರಿಯಾಣದ ಲೋಖಿತ್ ಪಕ್ಷದ ಶಾಸಕ ಗೋಪಾಲ್ ಕಾಂಡ ಅವರ ಬೆಂಬಲವನ್ನು ಬಿಜೆಪಿ ಹೊಂದಿರುತ್ತದೆ. ಇನ್ನು ಜೆಜೆಪಿ ಪಕ್ಷವು 10 ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 30 ಶಾಸಕರನ್ನು ಹಾಗೂ ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷವು ಒಬ್ಬರನ್ನು ಹೊಂದಿರುತ್ತದೆ.