ನವದೆಹಲಿ,ಮಾ 14(DaijiworldNews/AK): ಮಾರಣಾಂತಿಕ ದಾಳಿ ನಡೆಸುವ ಪಿಟ್ಬುಲ್, ಅಮೆರಿಕನ್ ಬುಲ್ಡಾಗ್ ರಾಟ್ವೀಲರ್ ಸೇರಿದಂತೆ 23 ನಾಯಿ ತಳಿಗಳನ್ನು ಅಪಾಯಕಾರಿಎಂದು ಕೇಂದ್ರ ಸರ್ಕಾರ ಗುರುತಿಸಿದೆ.
ಈ ವಿದೇಶಿ ನಾಯಿ ತಳಿಗಳ ಸಂತಾನೋತ್ಪತ್ತಿ, ಸಾಕುವುದು, ಮಾರಾಟ ಮಾಡುವುದನ್ನು ನಿಷೇಧಿಸುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ನಿರ್ದೇಶನ ನೀಡಿದೆ.
ಕೇಂದ್ರ ಪಶುಸಂಗೋಪನೆ ಇಲಾಖೆಯ ಜಂಟಿ ಕಾರ್ಯದರ್ಶಿ ಓ.ಪಿ ಚೌಧರಿ ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಆದೇಶ ರವಾನಿಸಿದ್ದಾರೆ. ಆದೇಶದಲ್ಲಿ ಜನರ ಜೀವಕ್ಕೆ ಅಪಾಯ ತಂದೊಡ್ಡುವ ಪಿಟ್ಬುಲ್, ಅಮೆರಿಕನ್ ಬುಲ್ಡಾಗ್ ಸೇರಿ ವಿವಿಧ ತಳಿಯ ವಿದೇಶಿ ನಾಯಿಗಳನ್ನು ಸಾಕಲು ಅನುಮತಿ ನೀಡದಂತೆ ಇಲಾಖೆ ಸೂಚಿಸಿದೆ.
ಜೊತೆಗೆ ಅಂತಹ ತಳಿಗಳ ನಾಯಿಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ. ಈಗ ಗುರುತಿಸಿರುವ ನಾಯಿಗಳನ್ನು ವಿವಿಧ ಸ್ಪರ್ಧೆಗೆ ಬಳಸುವುದನ್ನೂ ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಘ (ಪೆಟಾ) ಮನವಿ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.