ಹೈದರಾಬಾದ್, ಮಾ 15(DaijiworldNews/ AK): ಮುಂಬರುವ ಲೋಕಸಭೆ ಚುನಾವಣೆಗೆ ಭಾರತ ರಾಷ್ಟ್ರ ಸಮಿತಿಯ (ಬಿಆರ್ಎಸ್) ಹಾಗೂ ಬಹುಜನ ಸಮಾಜ ಪಕ್ಷವು(ಬಿಎಸ್ಪಿ) ಮೈತ್ರಿ ಮಾಡಿಕೊಂಡಿರುವುದಾಗಿ ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ ಘೋಷಿಸಿದ್ದಾರೆ.
ನಾಗರ್ಕರ್ನೂಲ್ ಮತ್ತು ಹೈದರಾಬಾದ್ ಲೋಕಸಭಾ ಕ್ಷೇತ್ರಗಳನ್ನು ಬಿಎಸ್ಪಿಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ತೆಲಂಗಾಣದಲ್ಲಿನ ಪ್ರಮುಖ ವಿರೋಧ ಪಕ್ಷ ಬಿಆರ್ಎಸ್, ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ಬಿಆರ್ಎಸ್ ಅನೇಕ ನಾಯಕರು ಲೋಕಸಭೆ ಚುನಾವಣೆಗೆ ಮುನ್ನ ಪಕ್ಷ ತೊರೆದು ಆಡಳಿತಾರೂಢ ಕಾಂಗ್ರೆಸ್ ಅಥವಾ ಬಿಜೆಪಿ ಸೇರಲಾರಂಭಿಸಿದ್ದಾರೆ.
ಬಿಆರ್ಎಸ್ ಸಂಸದರು ಈಗಾಗಲೇ ಪಕ್ಷ ತೊರೆದಿರುವುದರಿಂದ, ಬಿಆರ್ಎಸ್ ಶಾಸಕರು ತಾವು ಸಹ ಕಾಂಗ್ರೆಸ್ ಅಥವಾ ಬಿಜೆಪಿ ಸೇರಬೇಕೆ ಎನ್ನುವ ನಿರ್ಧಾರದ ಆಯ್ಕೆಗೆ ಲೋಕಸಭೆ ಚುನಾವಣೆ ಮುಗಿಯುವುದನ್ನು ಎದುರು ನೋಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಹಾಗೂ ಸ್ಥಳೀ ಯ ವಿಷಯಗಳ ಸಮೀಕರಣಗಳನ್ನು ಆಧರಿಸಿ ಮುಂದಿನ ಹೆಜ್ಜೆ ಇರಿಸುವ ಚಿಂತನೆಯಲ್ಲಿದ್ದಾರೆ.