ತುಮಕೂರು, ಮಾ 15(DaijiworldNews/AA): ಮನೆಯಲ್ಲಿ ಕುಳಿತಿದ್ದವರನ್ನ ಚುನಾವಣೆಗೆ ತಯಾರಾಗಿ ಎಂದು ಹೇಳಿದ್ರು. ಈಗ ನಡು ನೀರಲ್ಲಿ ನಮ್ಮ ಕೈ ಬಿಟ್ಟಿದ್ದಾರೆ. ನಂಬಿಸಿ ಕೈ ಬಿಟ್ಟ ಯಡಿಯೂರಪ್ಪ ಅವರ ಮೇಲೆ ನಮಗೆ ಬೇಸರವಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಅವರು ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಇದೀಗ ಮಧುಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವಕಾಶವಾದಿ, ಅವರು ಅವಕಾಶ ಕೇಳಿದ್ದಾರೆ. ಸೋಮಣ್ಣ ಮೇಲೆ ನಮಗೇನು ಬೇಸರವಿಲ್ಲ. ಆದರೆ ನಮ್ಮನ್ನು ನಂಬಿಸಿ ಕೈಬಿಟ್ಟ ಯಡಿಯೂರಪ್ಪ ಅವರ ಮೇಲೆ ನಮಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.
ಸೋಮಣ್ಣ ಅವರನ್ನು ಬೆಂಗಳೂರಿನಿಂದ ಎಂಎಲ್ ಸಿಗೆ ತಂದು ನಿಲ್ಲಿಸಿದ್ವಿ. ಅವರ ವಿರುದ್ಧ ಬಸವರಾಜು ಮಾಡಿದ್ರು. ಯಾರ್ಯಾರು ತನಗೆ ಅನ್ಯಾಯ ಮಾಡಿದ್ದಾರೆಂದು ಎಂದು ಪಕ್ಷಕ್ಕೆ 10 ಪೇಜ್ ಬರೆದುಕೊಟ್ಟಿದ್ದಾರೆ. ಇವತ್ತು ಅವರೇ ದೊಡ್ಡವರಾಗಿದ್ದಾರೆ. ನಾವು ಇಂದು ನಿಷ್ಠಾವಂತವಾಗಿ ದುಡಿದವರೇ ಲೆಕ್ಕಕ್ಕಿಲ್ಲ ಎಂದರೆ ನೋವಾಗಲ್ವಾ? ನಾವೇನು ಪಾರ್ಲಿಮೆಂಟ್ ನಲ್ಲಿ ಕೊಡಿ, ವಿಧಾನಸಭೆಯಲ್ಲಿ ಕೊಡಿ ಎಂದು ಕೇಳಿಲ್ಲ. ಗೌರವಯುತವಾಗಿ ವರ್ತಿಸದೇ ಇದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.