ಬೆಂಗಳೂರು, ಮಾ 16(DaijiworldNews/MS): “ಗ್ರಾಮೀಣ ಭಾಗದ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಸಿಎಸ್ಆರ್ ನಿಧಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದು, ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಎಸ್ ಶಾಲೆಗಳ ನಿರ್ಮಾಣ ಸಂಬಂಧ ರಾಮನಗರದಲ್ಲಿ ಖಾಸಗಿ ಸಂಸ್ಥೆಗಳ ಜತೆ ಶಿವಕುಮಾರ್ ಅವರು, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು“ಇಂದು ರಾಮನಗರ ಜಿಲ್ಲೆ ಹಾಗೂ ನನ್ನ ರಾಜಕೀಯ ಬದುಕಿಗೆ ಅತಿ ಹೆಚ್ಚು ಸಂತೋಷ ತಂದ ದಿನ. ರಾಜ್ಯದಲ್ಲಿ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹಳ್ಳಿಗಳಿಂದ ಬೆಂಗಳೂರು ಹಾಗೂ ಇತರೆ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ನಮ್ಮ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದೆ.
ಈ ಶಾಲೆಗಳ ನಿರ್ಮಾಣಕ್ಕೆ ಸರ್ಕಾರದ ಹಣವನ್ನು ಬಳಸದೇ, ಸಿಎಸ್ಆರ್ ನಿಧಿಯಿಂದ ನಿರ್ಮಿಸಲಾಗುತ್ತಿದೆ. ಪ್ರತಿ ಶಾಲೆಗೆ 7ರಿಂದ 10 ಕೋಟಿ ರೂಪಾಯಿಯಷ್ಟು ವೆಚ್ಚ ಮಾಡಲಾಗುವುದು. ಈ ಶಾಲೆಯಲ್ಲಿ 800ರಿಂದ 1200 ಮಕ್ಕಳು ವ್ಯಾಸಂಗ ಮಾಡಬಹುದು. ಇದರ ಪ್ರಾಯೋಗಿಕವಾಗಿ ನಮ್ಮ ರಾಮನಗರ ಜಿಲ್ಲೆಯಲ್ಲಿ 20 ಶಾಲೆಗಳ ಆರಂಭಕ್ಕೆ ಇಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಎಲ್ಲೆಲ್ಲಿ ಈ ಶಾಲೆಗಳು ನಿರ್ಮಾಣವಾಗಲಿದೆ ಎಂಬ ಪಟ್ಟಿಯನ್ನು ಸಧ್ಯದಲ್ಲೇ ನೀಡುತ್ತೇವೆ. ಇದು ದೇಶದಲ್ಲೇ ಒಂದು ಮಾದರಿ ಪರಿಕಲ್ಪನೆಯಾಗಿದೆ.
ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ನಮ್ಮ ಬಜೆಟ್ ನಲ್ಲೂ ಸಿದ್ದರಾಮಯ್ಯ ಅವರು ಈ ಶಾಲೆಗಳ ನಿರ್ಮಾಣದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಇದನ್ನು ನಮ್ಮ ಜಿಲ್ಲೆಯಿಂದ ಪ್ರಾರಂಭ ಮಾಡಲಾಗುತ್ತಿದೆ. ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಚರ್ಚೆ ಮಾಡಿದ್ದು ಅವರು ಬೋಧಕ ಸಿಬ್ಬಂದಿ ನೀಡಲಿದ್ದಾರೆ. ನಾನು 3 ಶಾಲೆಗಳನ್ನು ನಡೆಸುತ್ತಿದ್ದು, ಅವುಗಳ ಮೂಲಕ ನಾನೂ ಮೂರು ಪಬ್ಲಿಕ್ ಶಾಲೆಗಳ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಕೊರತೆ ಇರುವ ಶಿಕ್ಷಕರ ನೇಮಕಾತಿ ಮಾಡಿ ಅವರಿಗೆ ವೇತನ ನೀಡಲಾಗುವುದು. ಆಮೂಲಕ ಸರ್ಕಾರಿ ಶಾಲೆಗಳಲ್ಲೂ ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ ನೀಡಲಾಗುವುದು.
ಈ ಶಾಲೆಗಳು ಸರ್ಕಾರಿ ಶಾಲೆಗಳೇ ಆಗಿದ್ದು, ಸರ್ಕಾರಿ ಆಡಳಿತ ಮಂಡಳಿಗಳೇ ಶಾಲೆಗಳನ್ನು ನಿರ್ವಹಣೆ ಮಾಡಲಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು. ನಗರದಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ವರ್ಷಕ್ಕೆ 80 ಸಾವಿರದಿಂದ 1.50 ಲಕ್ಷದವೆರಗೂ ಶುಲ್ಕ ಪಾವತಿಸಬೇಕಿದೆ. ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಇಷ್ಟು ಶುಲ್ಕ ಪಾವತಿ ಮಾಡಲು ಆಗುವುದಿಲ್ಲ. ಹೀಗಾಗಿ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದೆ.
ಮೊದಲ ಹಂತದಲ್ಲಿ ರಾಮನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಐದು ಶಾಲೆಗಳ ನಿರ್ಮಾಣಕ್ಕೆ ಚರ್ಚೆ ಮಾಡಿ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಶಾಲೆಗಳ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸಲಾಗಿದ್ದು, ಸಿಎಸ್ಆರ್ ಹಣವನ್ನು ಸರ್ಕಾರ ಪಡೆಯುವುದಿಲ್ಲ. ಖಾಸಗಿ ಸಂಸ್ಥೆಗಳಿಗೆ ಜಾಗ ಯಾವುದು ಎಂದು ತೋರಿಸುತ್ತೇವೆ. ಅವರು ಆ ಜಾಗದಲ್ಲಿ ಶಾಲೆಯನ್ನು ಕಟ್ಟಿಕೊಡುತ್ತಾರೆ. ಇನ್ನು ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತರಬೇತಿ ನೀಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಇಂಡಿಯಾ ಒಕ್ಕೂಟ ಜನರನ್ನು ಲೂಟಿ ಮಾಡುತ್ತದೆ ಎಂದು ತಮಿಳುನಾಡಿನಲ್ಲಿ ಮೋದಿ ಪ್ರಧಾನಿ ಹೇಳಿಕೆ ಬಗ್ಗೆ ಕೇಳಿದಾಗ “ಚುನಾಚಣಾ ಫಲಿತಾಂಶ ಇದಕ್ಕೆಲ್ಲಾ ಉತ್ತರ ನೀಡುತ್ತದೆ” ಎಂದು ತಿರುಗೇಟು ನೀಡಿದರು.
ಒಮ್ಮತದಿಂದ ಅಭ್ಯರ್ಥಿ ಪಟ್ಟಿ ನಿರ್ಧಾರ:
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಎಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆಯೇ ಎಂದು ಕೇಳಿದಾಗ, “ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ” ಎಂದು ತಿಳಿಸಿದರು.