ನವದೆಹಲಿ, ಮಾ 17(DaijiworldNews/MS): ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಜಾರಿ ನಿರ್ದೇಶನಾಲಯ ಒಂಬತ್ತನೇ ಸಮನ್ಸ್ ಜಾರಿ ಮಾಡಿದ್ದು ಮಾರ್ಚ್ 21 ರಂದು ತನಿಖೆಗೆ ಹಾಜರಾಗುವಂತೆ ತಿಳಿಸಿದೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ಕೇಂದ್ರ ದೆಹಲಿಯಲ್ಲಿರುವ ಕೇಂದ್ರೀಯ ಸಂಸ್ಥೆಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೇಳಲಾಗಿದೆ. ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಜಾರಿ ಮಾಡಿರುವ ಒಂಬತ್ತನೇ ಸಮನ್ಸ್ ಇದಾಗಿದ್ದು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಜಾರಿ ಮಾಡಿದ್ದ ಸಮನ್ಸ್ಗಳನ್ನು ಕಾನೂನುಬಾಹಿರ ಎಂದು ಕರೆದಿದ್ದ ಕೇಜ್ರಿವಾಲ್ ಅವರು, ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು.
ಇ.ಡಿ 8 ಬಾರಿ ನೀಡಿದ ಸಮನ್ಸ್ ಪಾಲಿಸದ ಕೇಜ್ರಿವಾಲ್ ವಿರುದ್ಧ ಇಡಿ ನ್ಯಾಯಾಲಯದ ಮೊರೆ ಹೋಗಿತ್ತು. ಎರಡು ದೂರುಗಳ ಮೇಲೆ ದೆಹಲಿ ನ್ಯಾಯಾಲಯ ಶನಿವಾರ ಕೇಜ್ರಿವಾಲ್ ಅವರಿಗೆ 5,000 ರೂ. ವೈಯಕ್ತಿಕ ಬಾಂಡ್ನಲ್ಲಿ ಜಾಮೀನು ನೀಡಿ ಆದೇಶ ನೀಡಿತ್ತು.
ಇನ್ನೊಂದೆಡೆ ಎಎಪಿ ಹಿರಿಯ ನಾಯಕಿ ಮತ್ತು ದೆಹಲಿ ಸಚಿವೆ ಅತಿಶಿ ದೆಹಲಿ ಜಲ ಮಂಡಳಿಗೆ ಸಂಬಂಧಿಸಿದ 'ನಕಲಿ' ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಹೊಸ ಸಮನ್ಸ್ ಕಳುಹಿಸಿದೆ . ಈ ಡಿಜೆಬಿ (ದೆಹಲಿ ಜಲ ಮಂಡಳಿ) ಪ್ರಕರಣದ ಬಗ್ಗೆ ಯಾರಿಗೂ ತಿಳಿದಿಲ್ಲ. ಕೇಜ್ರಿವಾಲ್ ಅವರನ್ನು ಹೇಗಾದರೂ ಮಾಡಿ ಬಂಧಿಸಲು ಮತ್ತು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡದಂತೆ ತಡೆಯಲು ಇದು ಬ್ಯಾಕಪ್ ಯೋಜನೆಯಾಗಿದೆ' ಎಂದು ಆರೋಪಿಸಿದ್ದರು.