ನವದೆಹಲಿ, 18(DaijiworldNews/ AK): ಕೆಲವು ಸಂದರ್ಭಗಳು ಕೆಲವರ ಜೀವನವನ್ನೇ ಬದಲಾಯಿಸಿ ಬಿಡುತ್ತವೆ. ಇದೇ ರೀತಿಯ ಘಟನೆ ಛತ್ತೀಸ್ಗಡದ ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಅವರ ಜೀವನದಲ್ಲಿ ಸಹ ನಡೆದಿತ್ತು. ಅವರ ಸಾಧನೆಯ ಘಟ್ಟ ಇಲ್ಲಿದೆ.
ಪ್ರಿಯಾಂಕಾ ಶುಕ್ಲಾ ಅವರು ಐಎಎಸ್ ಅಧಿಕಾರಿಯಾಗುವುದಕ್ಕೂ ಮೊದಲು ಎಂಬಿಬಿಎಸ್ ಪದವಿ ಮುಗಿಸಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಜೀವನದಲ್ಲಿ ನಡೆದ ಆ ಒಂದು ಘಟನೆ ಅವರನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡುವಂತೆ ಮಾಡಿತ್ತು. ಅವರು ಡಾಕ್ಟರ್ ವೃತ್ತಿಗೆ ಗುಡ್ಬೈ ಹೇಳಿ ಐಎಎಸ್ ಅಧಿಕಾರಿಯಾಗದರು.
ಅದೊಂದು ದಿನ ಕೇಳಿದ ಒಂದೇ ಒಂದು ಮಾತಿನಿಂದ ಅವರ ಜೀವನವೇ ಸಂಪೂರ್ಣವಾಗಿ ಬದಲಾಯಿತು.ಅಂದಹಾಗೇ ಪ್ರಿಯಾಂಕಾ ಓದಿನಲ್ಲಿ ತುಂಬಾ ಬುದ್ದಿವಂತರಾಗಿದ್ದರು. ಅವರು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಿಂದ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದರು. ಪ್ರಾರಂಭಿಕ ದಿನಗಳಲ್ಲಿ ಡಾಕ್ಟರ್ ವೃತ್ತಿಗೆ ಸೇರಿದ ಅವರು ಪ್ರಿಯಾಂಕಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲು ಸ್ಲಂ ಏರಿಯಾಗೆ ಭೇಟಿ ನೀಡಿದ್ದರು.
ಸ್ಲಂ ನಿವಾಸಿಗಳ ಆರೋಗ್ಯ ತಪಾಸಣೆಗೆ ತೆರಳಿದ್ದ ಪ್ರಿಯಾಂಕಾರಿಗೆ ಅಲ್ಲಿ ಕಂಡ ಒಂದು ದೃಶ್ಯದಿಂದ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಆ ಸ್ಲಂ ಪ್ರದೇಶದಲ್ಲಿ ಅಶುದ್ಧ ನೀರನ್ನು ಕುಡಿಯುತ್ತಿರುವುದು ಕಣ್ಣಿಗೆ ಬಿತ್ತು.ಇದನ್ನು ಕಂಡ ಪ್ರಿಯಾಂಕಾ ಅವರು ಏಕೆ ಶುದ್ಧ ನೀರಿನ ಬದಲು ಅಶುದ್ಧ ನೀರನ್ನು ಕುಡಿಯುತ್ತಿದ್ದಾರೆಂದು ಪ್ರಶ್ನಿಸಿದ್ದರು. ಹೀಗೆ ಪ್ರಶ್ನಸಿದ್ದಕ್ಕೆ ಅಲ್ಲಿನ ಮಹಿಳೆ ‘ನೀನೇನು ಜಿಲ್ಲಾಧಿಕಾರಿಯೇ’ ಎಂದು ಪ್ರಶ್ನಿಸಿದ್ದರು.
ಈ ಪ್ರಶ್ನೆಯಿಂದ ದಂಗಾದ ಪ್ರಿಯಾಂಕಾ. ಸ್ಲಂ ಪ್ರದೇಶದ ಮಹಿಳೆ ಕೇಳಿದ ಆ ಪ್ರಶ್ನೆಯ ಬಗ್ಗೆ ಪ್ರಿಯಾಂಕಾ ತುಂಬಾ ಯೋಚಿಸಿದರು. ನಮ್ಮ ದೇಶದಲ್ಲಿ ಲಕ್ಷಾಂತರ, ಕೋಟ್ಯಂತರ ಜನರಿಗೆ ಇನ್ನೂ ಸರಿಯಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲವೆಂಬುದು ಅವರಿಗೆ ಮನದಟ್ಟಾಗಿತ್ತು.
ದೇಶದ ಜನರಿಗೆ ಸರಿಯಾದ ಮೂಲಸೌಕರ್ಯಗಳೇ ಸಿಗುತ್ತಿಲ್ಲ. ಅವರಿಗಾಗಿ ತಾವು ಏನಾದರೂ ಮಾಡಲೇಬೇಕೆಂದು ಪ್ರಿಯಾಂಕಾ ದೃಢನಿಶ್ಚಯ ಮಾಡಿದರು. ಆ ಒಂದು ಘಟನೆ ಪ್ರಿಯಾಂಕಾರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಹೀಗಾಗಿ ಅವರು ನಾಗರಿಕ ಸೇವಾ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದರು.
ಈ ನಿಟ್ಟಿನಲ್ಲಿ ತಯಾರಿ ನಡೆಸಿದ ಅವರು ಪರೀಕ್ಷೆ ಬರೆದು 2ನೇ ಪ್ರಯತ್ನದಲ್ಲಿಯೇ 73 ರ್ಯಾಂಕ್ ಗಳಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು.
ಸಾಮಾಜಿಕ ಕಾರ್ಯಗಳ ಮೂಲಕವೇ ಹೆಸರಾಗಿರುವ ಅವರಿಗೆ Census Silver Medal ದೊರೆತಿದೆ. ಅಷ್ಟೇ ಅಲ್ಲ ಜನರ ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಕ್ಕಾಗಿ ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಲಭಿಸಿದೆ.. ಅವರ ಸಾಮಾಜಿಕ ಕಳಕಳಿ, ಬದ್ಧತೆ ಪ್ರತಿಯೊಬ್ಬ ಯುಪಿಎಸ್ಸಿ ಆಕಾಂಕ್ಷಿಗೆ ಸ್ಫೂರ್ತಿಯಾಗಿದೆ.