ಬೆಂಗಳೂರು, ಮಾ 19(DaijiworldNews/AA): ಸದಾನಂದ ಗೌಡರು ಪಕ್ಷ ಬಿಡಲ್ಲ, ಬಿಜೆಪಿಯಲ್ಲೇ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಅವರ ನಾಯಕರಿಗಿಂತ ನಮ್ಮ ಪಕ್ಷದ ನಾಯಕರ ಮೇಲೆಯೇ ಪ್ರೀತಿ ಹೆಚ್ಚು. ಕಳೆದೊಂದು ವಾರದ ಎಂಬಿ ಪಾಟೀಲ್ ಹಾಗೂ ಇತರ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಅಸಮಾಧಾನ ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಪಕ್ಷದ ಮೈತ್ರಿ ವಿಚಾರದಲ್ಲಿ ಜೆಡಿಎಸ್ಗೆ ಸಮಾಧಾನ ಆಗುವಂಥ ತೀರ್ಮಾನವನ್ನು ಬಿಜೆಪಿ ಹೈಕಮಾಂಡ್ ಮಾಡಲಿದೆ. ಅಸಮಾಧಾನ ಶಮನವಾಗಲು ಯಾವಾಗ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಜೆಡಿಎಸ್ ಮತ್ತು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಇನ್ನು ಕೆಎಸ್ ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನ ಕೈಬಿಡಲ್ಲ. ಅವರು ಹಿರಿಯರು, ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿದ್ದು, ಸತ್ಯದ ಅರಿವಾದ ಮೇಲೆ ಎಲ್ಲವೂ ಸರಿಹೋಗಲಿದೆ. ಇಂದು ಮತ್ತು ನಾಳೆ ದೆಹಲಿಯಲ್ಲಿ ಸಭೆ ಇದ್ದು, ಬಾಕಿ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರು ಅಂತಿಮವಾಗಲಿದೆ ಎಂದು ತಿಳಿಸಿದರು.