ಶಿವಮೊಗ್ಗ, ಮಾ 20(DaijiworldNews/ AK): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಗೆದ್ದ ಬಳಿಕ ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಮಾಜಿ ಸಚಿವ ಕೆ.ಎಸ್ ಈಶ್ವಪ್ಪ ಖಡಕ್ ಆಗಿ ಹೇಳಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ರೆಡಿಯಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರಿಂದು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ವೈ ರಾಘವೇಂದ್ರನನ್ನ ಸೋಲಿಸಿ, ಬಿಜೆಪಿ ಕಟ್ಟಾ ಅನುಯಾಯಿಯಾದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಈಶ್ವರಪ್ಪ ಸ್ಪರ್ಧೆ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಆದರೆ ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಚುನಾವಣಾ ಫಲಿತಾಂಶ ಬಂದು ಬಿಜೆಪಿ ಕಾರ್ಯಕರ್ತರ ವಿಜಯವಾಗುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಮುಂದಿನ ಜೂನ್ನಲ್ಲೇ ಪರಿಷತ್ ಸ್ಥಾನ ಖಾಲಿ ಆಗುತ್ತದೆ, ನಿಮ್ಮ ಮಗನನ್ನ ಎಂಎಲ್ಸಿ ಮಾಡ್ತೀವಿ. ನಿಮಗೆ ರಾಜ್ಯಪಾಲರ ಹುದ್ದೆ ಕೊಡ್ತೀವಿ ಅಂತ ಬಿಜೆಪಿ ಹೈಕಮಾಂಡ್ ನನಗೆ ಆಫರ್ ಕೊಟ್ಟಿದೆ.
ನನಗೆ ಸ್ಥಾನಮಾನ ಬೇಡ, ಪಕ್ಷ ಉಳಿಯಬೇಕು, ಬಿಎಸ್ವೈ ಕುಟುಂಬದ ಸರ್ವಾಧಿಕಾರದಿಂದ ಮುಕ್ತವಾಬೇಕು ಎಂಬುದಷ್ಟೇ ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.