ನವದೆಹಲಿ, ಮಾ 21(DaijiworldNews/MS): "17 ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಅಂತಿಮವಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದೆಹಲಿಯಲ್ಲಿ ಬುಧವಾರ ನಡೆದ ಸಿಇಸಿ ಸಭೆ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, "ಅಂತಿಮ ನಾಲ್ಕು ಕ್ಷೇತ್ರಗಳಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು. ನಾಳೆ ಈ ಕ್ಷೇತ್ರಗಳ ಸ್ಥಳೀಯ ನಾಯಕರ ಸಭೆ ಕರೆಯಲಾಗಿದೆ. ನಂತರ ನಾಡಿದ್ದು ಜೂಮ್ ಮೂಲಕ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.
ಕೋಲಾರ ನಾಯಕರ ಭೇಟಿ ಬಗ್ಗೆ ಕೇಳಿದಾಗ, "ರಾಜಕೀಯವಾಗಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಪಕ್ಷ ಹೇಳಿದಂತೆ ಎಲ್ಲರೂ ಕೇಳುತ್ತಾರೆ" ಎಂದು ತಿಳಿಸಿದರು.
ಬಾಗಲಕೋಟೆ ಟಿಕೆಟ್ ಸಿಗದ ಕಾರಣ ವೀಣಾ ಕಾಶಪ್ಪನವರ್ ಕಣ್ಣೀರು ಹಾಕಿರುವ ಬಗ್ಗೆ ಕೇಳಿದಾಗ, "ಉಸ್ತುವಾರಿ ಸಚಿವರುಗಳು ಯಾರ ಹೆಸರನ್ನು ಸಲಹೆ ನೀಡಿದ್ದರೋ ಅವರ ಎಲ್ಲಾ ಹೆಸರುಗಳು ಸಿಇಸಿ ಸಭೆಯಲ್ಲಿ ಚರ್ಚೆ ಆಗಿದೆ" ಎಂದು ತಿಳಿಸಿದರು.
50% ಟಿಕೆಟ್ ಯುವಕರಿಗೆ ನೀಡಿದ್ದೇವೆ:
ಸಚಿವರ ಕುಟುಂಬದವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಕೇಳಿದಾಗ, "ರಾಜಕೀಯ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವವರಿಗೂ ಹೊಸ ಅಭ್ಯರ್ಥಿಗಳನ್ನು ತರುವುದಕ್ಕೂ ವ್ಯತ್ಯಾಸವಿದೆ. ಇಡೀ ದೇಶದಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು 50% ಯುವಕರಿಗೆ ಅವಕಾಶ ನೀಡಿದ್ದೇವೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಇತಿಹಾಸದಲ್ಲಿ ಇದು ದೊಡ್ಡ ಬದಲಾವಣೆ. ನಾವು ವಿದ್ಯಾವಂತ ಯುವಕರಿಗೆ ಅವಕಾಶ ನೀಡಿದ್ದೇವೆ. ಎಲ್ಲರೂ ಸಮರ್ಥರಿದ್ದು, ಎಲ್ಲರ ಮೇಲೂ ಹೊಣೆಗಾರಿಕೆ ಇದೆ" ಎಂದು ತಿಳಿಸಿದರು.
ಸದಾನಂದ ಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಬಗ್ಗೆ ಕೇಳಿದಾಗ, "ಆ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡುವುದಿಲ್ಲ. ಬೇರೆ ಪಕ್ಷಗಳ ಬಗ್ಗೆ ಮಾತನಾಡಿಲ್ಲ. ಬಿಜೆಪಿಯಲ್ಲಿ ಅನೇಕರಿಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳು ತೋರಿಸುತ್ತಿವೆ. ಮುಂದೆ ಕಾಲ ಉತ್ತರಿಸುತ್ತದೆ" ಎಂದು ತಿಳಿಸಿದರು.
ಹಳೇ ಫೋಟೋ ಇಟ್ಟುಕೊಂಡು ಈಗ ಮಾತಾಡುತ್ತಿದ್ದಾರೆ:
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕುಕ್ಕರ್ ಹಂಚಲಾಗುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ನಾವು ಹಬ್ಬ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಜನರಿಗೆ ಅನೇಕ ಬಾರಿ ಸಹಾಯ ಮಾಡಿದ್ದೇವೆ. ಹಳೆಯ ಫೋಟೋ ಇಟ್ಟುಕೊಂಡು ಈಗ ನೀಡುತ್ತಿರಬಹುದು. ಅವರು ಬಹಳ ಪ್ರಾಮಾಣಿಕರು. ನಾನು ನನ್ನ ಮಗಳ ಮದುವೆ ಸಂದರ್ಭದಲ್ಲಿ ಎಲ್ಲರಿಗೂ ಸೀರೆ ಬಟ್ಟೆ ಕೊಟ್ಟಿದ್ದೇನೆ. ಕನಕೊತ್ಸವ ಮಾಡಿದಾಗ ಸಿಹಿ ಹಂಚಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆ ನೀಡಿದ್ದೇವೆ. ಕೋವಿಡ್ ಸಮಯದಲ್ಲಿ ಆಹಾರ ಕಿಟ್ ನೀಡಿದ್ದೇವೆ. ಜನರಿಗೆ ನಾವು ಅನೇಕ ಬಾರಿ ಸಹಾಯ ಮಾಡಿದ್ದೇವೆ. ಚುನಾವಣಾ ನೀತಿ ಸಂಹಿತೆಗೂ ಮುನ್ನ ರಂಜಾನ್ ಹಬ್ಬದ ಸಂದರ್ಭದಲ್ಲಿ ನಾವು ಉಡುಗೊರೆ ನೀಡುತ್ತಾ ಬಂದಿದ್ದೇವೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಕೇಳಿದಾಗ, "ಅದು ಅವರ ಪಕ್ಷದ ತೀರ್ಮಾನ. ಅವರು ಎಲ್ಲಾದರೂ ಯಾವ ಪಕ್ಷದ ಚಿಹ್ನೆಯಿಂದಾದರೂ ನಿಲ್ಲಲಿ" ಎಂದು ತಿಳಿಸಿದರು.
ಬಿಜೆಪಿ ಮೆಚ್ಚಿಸಲು ಕುಮಾರಸ್ವಾಮಿ ನನ್ನ ಬಗ್ಗೆ ಮಾತಾಡುತ್ತಿದ್ದಾರೆ:
ಡಿ.ಕೆ. ಸಹೋದರರು ವಿಷ ಹಾಕಿದ್ದಾರೆ, ಸರ್ಕಾರ ಬೀಳುವುದಕ್ಕೆ ಅವರೇ ಕಾರಣ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, "ಸರ್ಕಾರ ಕೆಡವಿದರಲ್ಲಿ ನನ್ನ ಪಾತ್ರ ಏನಾದರೂ ಇದ್ದರೆ ಆ ದೇವರು, ಮಂಜುನಾಥ ನನಗೆ ಶಿಕ್ಷೆ ನೀಡಲಿದ್ದಾರೆ. ನನಗೂ ಅವರಿಗೂ ಅನೇಕ ಭಿನ್ನಾಭಿಪ್ರಾಯ ಇದ್ದರೂ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಸದನದಲ್ಲಿ ಅವರ ಬೆನ್ನಿಗೆ ನಿಂತು ಒಗ್ಗಟ್ಟಾಗಿ ನಿಂತಿದ್ದೇನೆ. ಇದು ರಾಜ್ಯದ ಜನರಿಗೂ ಗೊತ್ತು. ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಮರುದಿನ ಬಿಜೆಪಿ ನಾಯಕರ ಜತೆ ಚರ್ಚೆ ಮಾಡಿದ್ದಾರೆ. ಈಗ ಏನಾದರೂ ಹೇಳಬೇಕಲ್ಲ ಅದಕ್ಕೆ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮೇಲೆ ಕೋಪ ತೋರಿಸಿ ಬಿಜೆಪಿ ಅವರಿಗೆ ಖುಷಿ ಪಡಿಸುವುದಾದರೆ ಮಾಡಲಿ. ನನ್ನ ಅಭ್ಯಂತರವಿಲ್ಲ. ಅವರಿಗೆ ಒಳ್ಳೆಯದಾಗಲಿ. ಅವರ ಆರೋಗ್ಯ ಚೇತರಿಸಿಕೊಳ್ಳಲಿ" ಎಂದು ತಿಳಿಸಿದರು.