ಕೇರಳ, ಮಾ 24(DaijiworldNews/AA): ಭಾರತದ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ಸಿ ಕೂಡ ಒಂದು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಠಿಣ ಪರಿಶ್ರಮ ಅತ್ಯಗತ್ಯ. ಹೀಗೆ ಕೂಲಿ ಕಾರ್ಮಿಕನಾಗಿದ್ದು, ಐಎಎಸ್ ಅಧಿಕಾರಿಯಾಗುವ ಕನಸನ್ನ ತನ್ನ ಕಠಿಣ ಪರಿಶ್ರಮದ ಮೂಲಕ ನನಸಾಗಿಸಿಕೊಂಡ ಶ್ರೀನಾಥ್ ಅವರ ಯಶೋಗಾಥೆ ಇದು.
ಶ್ರೀನಾಥ್ ಅವರು ಕೇರಳದ ಮುನ್ನಾರ್ ನ ಬಡ ಕುಟುಂಬವೊಂದರಲ್ಲಿ ಜನಿಸಿದ್ದು, ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಎರ್ನಾಕುಲಮ್ ರೈಲ್ವೇ ನಿಲ್ದಾಣದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ದಿನದಲ್ಲಿ ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಅವರು ದಿನಕ್ಕೆ 400 ರೂ. ಇಂದ 500 ರೂ. ವರೆಗೆ ದುಡಿಯುತ್ತಿದ್ದರು.
ಶ್ರೀನಾಥ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಧ್ಯಯನ ಮಾಡಲು ಆರಂಭಿಸುತ್ತಾರೆ. ಆದರೆ ಅವರ ಬಳಿ ತರಬೇತಿ ಕೇಂದ್ರದ ಶುಲ್ಕವನ್ನು ಭರಿಸುವಷ್ಟು ಹಣವಿರಲಿಲ್ಲ. ಆದರೆ ಅವರ ಬಳಿ ಇದ್ದ ಸ್ಮಾರ್ಟ್ ಫೋನ್ ಮೂಲಕವೇ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. 2016ರ ಜನವರಿಯಲ್ಲಿ ಸರ್ಕಾರವು ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಉಚಿತವಾಗಿ ವೈಫೈ ನೀಡಲು ಪ್ರಾರಂಭಿಸಿತು. ಇದನ್ನು ಸದುಪಯೋಗ ಪಡಿಸಿಕೊಂಡ ಶ್ರೀನಾಥ್ ಅವರು, ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಆನ್ ಲೈನ್ ಕೋರ್ಸ್ ಗಳೊಂದಿಗೆ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ. ಈ ಮೂಲಕ ಸಾಧನೆಗೆ ಬೇಕಾಗಿರುವುದು ಛಲ, ಉತ್ಸಾಹ ಎನ್ನುವುದನ್ನ ಅವರು ಸಾಬೀತುಪಡಿಸುತ್ತಾರೆ.
ಈ ವೇಳೆ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆ(ಕೆಪಿಎಸ್ ಸಿ) ಬರೆದ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಆದರೆ ಅವರಿಗೆ ಇದು ತೃಪ್ತಿ ನೀಡಲಿಲ್ಲ. ಆದ್ದರಿಂದ ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿ ಪರೀಕ್ಷೆಯನ್ನು ಬರೆಯುತ್ತಾರೆ. ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ. ಈ ಮೂಲಕ ಕೂಲಿ ಕಾರ್ಮಿಕನಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಸರ್ಕಾರಿ ಉನ್ನತ ಅಧಿಕಾರಿಯಾಗುವ ವರೆಗಿನ ಅವರ ಪ್ರಯಾಣ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ.