ನವದೆಹಲಿ, ಮಾ 25(DaijiworldNews/MS): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಜೆಎನ್ ಯು ಎಸ್ ) ಅಧ್ಯಕ್ಷರಾಗಿ ಅಭ್ಯರ್ಥಿ ಧನಂಜಯ್ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎರಡೂವರೆ ದಶಕದ ಬಳಿಕ ಮೊದಲ ಬಾರಿಗೆ ದಲಿತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಶನ್ನ ಧನಂಜಯ್ ಅವರು 2598 ಮತಗಳನ್ನು ಗಳಿಸಿದ್ದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ನ ಉಮೇಶ್ ಸಿ ಅಜ್ಮೀರಾ 1676 ಮತಗಳನ್ನು ಗಳಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಅವಿಜಿತ್ ಘೋಷ್ ಆಯ್ಕೆಯಾಗಿದ್ದು ಇವರು ಎಬಿವಿಪಿಯ ದೀಪಿಕಾ ಶರ್ಮಾ ಅವರನ್ನು ಸೋಲಿಸಿದ್ದಾರೆ. ಧನಂಜಯ್ ಬಿಹಾರದ ಗಯಾಗೆ ಸೇರಿದವರಾಗಿದ್ದು ಎಡ ಮೈತ್ರಿಕೂಟದ ಪ್ರಕಾರ, 27 ವರ್ಷಗಳ ನಂತರ JNUSU ನ ಎರಡನೇ ದಲಿತ ಅಧ್ಯಕ್ಷರಾಗಿದ್ದಾರೆ.
ಭಾನುವಾರ ರಾತ್ರಿ 11.30 ರ ಸುಮಾರಿಗೆ ಪ್ರಕಟವಾದ ಫಲಿತಾಂಶದಲ್ಲಿ , ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್ಯುಎಸ್ಯು) ಮೂರು ಸ್ಥಾನಗಳನ್ನು ಯುನೈಟೆಡ್ ಲೆಫ್ಟ್ ಪ್ಯಾನೆಲ್ ಗೆದ್ದುಕೊಂಡರೆ, ಬಿರ್ಸಾ ಅಂಬೇಡ್ಕರ್ ಫುಲೆ ಸ್ಟೂಡೆಂಟ್ಸ್ ಅಸೋಸಿಯೇಷನ್ (ಬಾಪ್ಸಾ) ಒಂದು ಹುದ್ದೆಯನ್ನು ಗೆದ್ದಿದೆ ಎಂದು ಚುನಾವಣಾ ಸಮಿತಿ ಘೋಷಿಸಿದೆ. ಆರ್ಎಸ್ಎಸ್-ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೆಲವು ಮತಗಳಿಂದ ಎಲ್ಲಾ ಹುದ್ದೆಗಳನ್ನು ಕಳೆದುಕೊಂಡಿತು.