ಉತ್ತರ ಪ್ರದೇಶ, ಮಾ 26(DaijiworldNews/AK): ಮುರಿದು ಬಿದ್ದ ಮದುವೆಯ ಮಧ್ಯೆಯೂ ಛಲ ಬಿಡದೇ ಜೀವನದಲ್ಲಿ ಎತ್ತರಕ್ಕೆ ಬೆಳೆದ ಐಎಎಸ್ ಅಧಿಕಾರಿ ಶಿವಂಗಿ ಗೋಯಲ್ ಅವರ ಕಥೆ ಎಂಥವರಿಗೂ ಸ್ಪೂರ್ತಿದಾಯಕ.
ಶಿವಾಂಗಿ ಗೋಯಲ್ ಅವರು ಉತ್ತರ ಪ್ರದೇಶದ ಹಾಪುರ್ ನ ಪಿಲ್ಖುವಾ ಪಟ್ಟಣದ ನಿವಾಸಿ. ಓದಿನಲ್ಲಿ ಬುದ್ದಿವಂತೆ, ಚುರುಕಾಗಿದ್ದ ಶಿವಾಂಗಿಯ ಜೀವನ ಮದುವೆಯ ಬಳಿಕ ನರಕವಾಗಿತ್ತು. ಮದುವೆಗೂ ಮುನ್ನ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರು. ಆದರೆ ಎರಡೂ ಬಾರಿ ವಿಫಲವಾಯಿತು.
ಮದುವೆಯ ನಂತರ ಪತಿ ಮತ್ತು ಅತ್ತೆ ಹಿಂಸೆ ನೀಡುಇತ್ತಿದ್ದರು. ನಿತ್ಯ ಪತಿ-ಅತ್ತೆ ಹೊಡೆಯುತ್ತಿದ್ದರು. ಇದರ ಮಧ್ಯೆಯೇ ಶಿವಾಂಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗಳು ಹುಟ್ಟಿದ ಮೇಲೆ ದಾಂಪತ್ಯ ಜೀವನ ಸರಿ ಹೋಗಬಹುದು ಎಂದುಕೊಂಡಿದ್ದರು ಶಿವಾಂಗಿ. ಆದರೆ ಅದು ಕೂಡ ಸಾಧ್ಯವಾಗಿಲ್ಲ. ಕೊನೆಗೆ ಗಂಡ ಮನೆಯವರ ಕಾಟ ತಾಳಲಾರದೆ ಮಗಳಿನೊಂದಿಗೆ ಶಿವಾಂಗಿ ಅವರು ತವರುಮನೆ ಕಡೆ ಮುಖ ಮಾಡಿದರು. 7 ವರ್ಷದ ಮಗಳೊಂದಿಗೆ ಮನೆಗೆ ಬಂದಾಗ ತಂದೆ ಆಸರೆಯಾದರು. ನಿನ್ನ ಕಾಲಿನ ಮೇಲೆ ನಿಲ್ಲಲು ನೀನು ಏನು ಬೇಕಾದರೂ ಮಾಡಬಹುದು ಎಂದು ತಂದೆ ಸಲಹೆ ನೀಡಿದರು.
ಆ ಸಲಹೆಯಂತೆ ಮುನ್ನುಗ್ಗಿದ್ದ ಶಿವಾಂಗಿ ಎಲ್ಲಾ ನೋವನ್ನು ನುಂಗಿಕೊಂಡು ಮಗಳಿಗಾಗಿ ಮತ್ತೆ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. 2021ರಲ್ಲಿ ಮೂರನೇ ಪ್ರಯತ್ನದಲ್ಲಿ 177ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದರು. UPSC ಪರೀಕ್ಷೆಯ ಫಲಿತಾಂಶ ಬರುವಾಗಲೂ ಶಿವಂಗಿ ಗೋಯಲ್ ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿತ್ತು. ಆದರೆ ಆಕೆ ಅದ್ಯಾವುದರಿಂದಲೂ ವಿಚಲಿತಳಾಗದೆ ತನ್ನ ಗುರಿ ಮುಟ್ಟಿದ್ದಳು. ಅದರಿಂದ ಆಕೆಯ ಜೀವನವೇ ಬದಲಾಯಿತು. ಈ ಮೂಲಕ ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡು ಬಾಳುವ ಅಗತ್ಯವಿಲ್ಲ ಎಂದು ಶಿವಾಂಗಿ ಸಾಬೀತುಪಡಿಸಿದ್ದಾರೆ. ಎಷ್ಟೇ ಕಷ್ಟ ಇದ್ದರೂ ಸಾಧನೆ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.
ಹೆಣ್ಣುಮಕ್ಕಳಿಗೆ ಮದುವೆ ಒಂದೇ ಜೀವನದ ಯಶಸ್ಸು ಅಲ್ಲ, ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದು ನಿಜವಾದ ಯಶಸ್ಸು ಎನ್ನುವುದನ್ನ ಶಿವಾಂಗಿ ಸಾಬೀತು ಪಡಿಸಿದ್ದಾರೆ.