ಬೆಂಗಳೂರು, ಮಾ 26(DaijiworldNews/ AK): ಕಾಂಗ್ರೆಸ್ಸಿಗರಿಗೆ ಸೋಲಿನ ಹತಾಶೆ ಕಾಡುತ್ತಿರುವಂತಿದೆ. ಜನರೇ ಮೋದಿ ಮೋದಿ ಎನ್ನುವ ಕಾರಣ ಅಸಹಾಯಕತೆ ಕಾಡುತ್ತಿರುವಂತೆ ಕಾಣುತ್ತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ನಗರದ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಕೈಲಾಗದವ ಮೈ ಪರಚಿಕೊಂಡ ಎಂಬಂತೆ ದ್ವೇಷ ಮತ್ತು ಅಸಹಿಷ್ಣುತೆಯ ಮಾತುಗಳನ್ನು ಆಡುತ್ತಿದ್ದಾರೆ. ಇವರ ನಾಯಕ ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಭಾರತವನ್ನು ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿಯವರ ಬಗೆಗಿನ ವಿರೋಧ ಮತ್ತು ದ್ವೇಷಕ್ಕಾಗಿ ಭಾರತ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತದ ಸಹಿಷ್ಣುತೆಯನ್ನು ಪ್ರಶ್ನಿಸಿ ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಈ ಲೋಕಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟದ ನೇತೃತ್ವ ಇನ್ನೂ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲ. ಯಾವ ನೀತಿ ಇಟ್ಟುಕೊಂಡು ಜನರ ಮುಂದೆ ಹೋಗಬೇಕು ಎಂಬುದಕ್ಕೆ ನೀತಿಯೇ ಇಲ್ಲ. ಅಸಹಿಷ್ಣುತೆ, ದ್ವೇಷವೇ ಇಂಡಿ ಒಕ್ಕೂಟದ ನೀತಿಯಾಗಿದೆ ಎಂದು ಟೀಕಿಸಿದರು.
ಡಿಎಂಕೆ ನಾಯಕ ಸ್ಟಾಲಿನ್ರಿಂದ ಆರಂಭಿಸಿ ಉದಯನಿಧಿ, ಸಚಿವರಾದ ಅನಿತಾ ರಾಧಾಕೃಷ್ಣನ್ ವರೆಗೆ ದ್ವೇಷದ ಮಾತುಗಳನ್ನೇ ಆಡುತ್ತಿದ್ದಾರೆ. ಹತಾಶೆಯ ಪರಿಣಾಮವಾಗಿ ಈ ಮಾತುಗಳನ್ನು ಆಡುವುದು ಸ್ಪಷ್ಟ ಎಂದು ಅವರು ವಿವರಿಸಿದರು.3ನೇ ಬಾರಿ ಮೋದಿಯವರು ಪ್ರಧಾನಿ ಆಗುತ್ತಾರೆಂಬ ಅಸಹಾಯಕತೆ ಅವರ ಬಾಯಿಂದ ದ್ವೇಷದ ಮಾತುಗಳಿಗೆ ಕಾರಣವಾಗಿದೆ ಎಂದು ನುಡಿದರು.
ನಮ್ಮ ಪ್ರಧಾನಿಯವರು ವಿಜನ್ (ದೂರದೃಷ್ಟಿ) ಇಟ್ಟುಕೊಂಡು ಮಿಷನ್ ಮೋಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಆಗಲಿದೆ. ಆ ಸಂದರ್ಭದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲೂ ಜಗತ್ತಿನ ನಂಬರ್ 1 ಸ್ಥಾನಕ್ಕೆ ಏರಬೇಕೆಂಬ ದೂರದೃಷ್ಟಿ ನಮ್ಮದು. ಆರ್ಥಿಕ- ಶೈಕ್ಷಣಿಕ ಸೇರಿ ಎಲ್ಲ ರಂಗಗಳಲ್ಲಿ ಸಾಮಥ್ರ್ಯಶಾಲಿ ರಾಷ್ಟ್ರವಾಗಬೇಕೆಂಬ ದೂರದೃಷ್ಟಿಯ ಸಂಕಲ್ಪ ನಮ್ಮ ಪ್ರಧಾನಿಯವರದು ಎಂದು ಸಿ.ಟಿ.ರವಿ ಅವರು ವಿವರಿಸಿದರು.