ಬೆಂಗಳೂರು, ಮಾ 31(DaijiworldNews/AK): ಆದರಣೀಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಉತ್ತುಂಗದಲ್ಲಿದೆ. ಮೋದಿಜೀ ಅವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ನಮ್ಮ ಕಾರ್ಯಕರ್ತರು ಸ್ವೀಕರಿಸಿ ಅದರಲ್ಲಿ ಯಶಸ್ಸು ಕಾಣಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾನೂನು ಘಟಕವು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಕೇಸು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲವಾದರೆ, ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಹತಾಶ ಸ್ಥಿತಿಯಲ್ಲಿದೆ. ಕೇವಲ 9 ತಿಂಗಳ ಹಿಂದೆ ಅಧಿಕಾರ ಪಡೆದ ಈ ಕಾಂಗ್ರೆಸ್ ಸರಕಾರವು ಯಾವುದೋ ಒಂದು ಭ್ರಮೆಯಲ್ಲಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಅಭೂತಪೂರ್ವ ಬೆಂಬಲದಿಂದ ಅಧಿಕಾರದ ಅಮಲಿನಲ್ಲಿ ಅದು ತೇಲುತ್ತಿತ್ತು. ಕಾಂಗ್ರೆಸ್ಸಿಗರಿಗೆ ಇವತ್ತು ಕ್ರಮೇಣವಾಗಿ ಜ್ಞಾನೋದಯ ಆಗುತ್ತಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಸತ್ಯಸಂಗತಿಗಳು ಮನವರಿಕೆ ಆಗುತ್ತಿವೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳು ಅತಿ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ತಯಾರಿಗಾಗಿ 10-15 ಜನ ಸಚಿವರನ್ನು ಅಭ್ಯರ್ಥಿಗಳನ್ನಾಗಿ ಮಾಡುವ ಘೋಷಣೆ ಮಾಡಿದ್ದರು. ಆದರೆ, ಯಾವನೇ ಒಬ್ಬ ಸಚಿವರು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಗಲು ತಯಾರಾಗಲಿಲ್ಲ. ಮೋದಿಜೀಯವರ ಜನಪ್ರಿಯತೆ ಕಾರಣಕ್ಕಾಗಿ ತಾವು ಚುನಾವಣೆಯಲ್ಲಿ ಗೆಲ್ಲದೇ ಹೋದರೆ ಹಾಗೂ ಜನರಿಂದ ತಿರಸ್ಕಂತ ಆದರೆ ಎಂಬ ಭಯದಿಂದ ಯಾವುದೇ ಸಚಿವರು ಚುನಾವಣೆಯಲ್ಲಿ ನಿಲ್ಲಲು ತಯಾರಾಗಲಿಲ್ಲ ಎಂದು ವಿಶ್ಲೇಷಣೆ ಮಾಡಿದರು.
ಸುಳ್ಳು ಪ್ರಚಾರದಿಂದ ಪ್ರಯೋಜನ ಸಿಗಲಾರದು ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಜ್ಞಾನೋದಯ ಆಗಿದೆ. ಕೇವಲ 9 ತಿಂಗಳಲ್ಲಿ ಕೆಟ್ಟ ಸರಕಾರ ಎಂಬ ಹೆಸರನ್ನು ಕಾಂಗ್ರೆಸ್ ಸರಕಾರ ಪಡೆದುಕೊಂಡಿದೆ. ಜನರು ಹತಾಶರಾಗಿದ್ದಾರೆ. ಕೇಂದ್ರದ ಬಿಜೆಪಿ ಸರಕಾರದ ಜನಪ್ರಿಯತೆಯನ್ನು ನಾವು ಬಳಸಿಕೊಳ್ಳಬೇಕು ಎಂದ ಅವರು, ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗಿನಂತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಅವರು ಮಾತನಾಡಿ, ಕಳೆದ 12 ದಿನಗಳಲ್ಲಿ ಸುಮಾರು 25 ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪ್ರಧಾನಿಯವರ ವಿರುದ್ಧ ಮಾತನಾಡಿದ ಶಿವರಾಜ ತಂಗಡಗಿ ವಿರುದ್ಧ ಕಾರಟಗಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವಿವರಿಸಿದರು. ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ ಮುಖ್ಯಮಂತ್ರಿಗಳ ಮಗ ಯತೀಂದ್ರ ಸಿದ್ದರಾಮಯ್ಯರ ವಿರುದ್ಧ ದೂರು ಕೊಡಲಾಗಿದೆ ಎಂದು ತಿಳಿಸಿದರು.