ನವದೆಹಲಿ, ಏ 01(DaijiworldNews/AA): ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಏ.15ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಇಡಿಯು ಮಾ. 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ನಂತರ ಕೇಜ್ರಿವಾಲ್ ಅವರನ್ನು ಇಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿತ್ತು. ನ್ಯಾಯಾಲಯ ಮಾರ್ಚ್ 28ರ ವರೆಗೆ ಅವರನ್ನು ಇಡಿ ಕಸ್ಟಡಿಗೆ ನೀಡಿತ್ತು. ಮಾರ್ಚ್ 28 ರಂದು ಮತ್ತೆ ನ್ಯಾಯಾಲಯದ ಮುಂದೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿದ ಇಡಿ ಇನ್ನೂ ಏಳು ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಕೋರಿತ್ತು.
ಆದರೆ ನ್ಯಾಯಾಲಯವು ಏ.1ರವರೆಗೆ ಇಡಿ ಕಸ್ಟಡಿಗೆ ನೀಡಿತ್ತು. ಸೋಮವಾರ ಇಡಿ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಇಡಿ ನ್ಯಾಯಾಂಗದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಏ.15ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.