ಉತ್ತರ ಪ್ರದೇಶ, ಏ. 02 (DaijiworldNews/AK): ಬಹಳಷ್ಟು ಮಂದಿ ವಿದೇಶದಲ್ಲಿ ಉದ್ಯೋಗ ಮಾಡಬೇಕು, ಅಲ್ಲಿಯೇ ಸೆಟಲ್ ಆಗಬೇಕುಎಂಬ ಕನಸು ಆಗಿರುತ್ತದೆ. ಹಾಗೇನೇ ಸೌಮ್ಯ ಅಗರ್ವಾಲ್ ಅವರು ಕೂಡ ಇಂಜಿನಿಯರಿಂಗ್ ಮಾಡಿದ ಬಳಿಕ ಲಂಡನ್ ನಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಆದರೆ ತವರು ದೇಶ ಅವರನ್ನು ಕೈಬೀಸಿ ಕರೆದಿತ್ತು. ಹಾಗೀದ್ರೆ ಐಎಎಸ್ ಸೌಮ್ಯ ಅಗರ್ವಾಲ್ ಆಗಿದ್ದು ಹೇಗೆ? ಈ ಕುರಿತು ತಿಳಿಯೋಣ.
ವಿದೇಶದಲ್ಲಿ ಒಳ್ಳೆಯ ಉದ್ಯೋಗಗಳನ್ನು ಬಿಟ್ಟು ಭಾರತದಲ್ಲಿ ಸಾರ್ವಜನಿಕ ಸೇವೆಯನ್ನು ಆಯ್ಕೆ ಮಾಡಿಕೊಂಡಂತಹ ಹಲವು ಉದಾಹರಣೆಗಳು ನಮ್ಮ ಸುತ್ತಮುತ್ತಲೇ ಇವೆ. ಅನೇಕ ಐಎಎಸ್ ಅಧಿಕಾರಿಗಳು ಲಂಡನ್-ಅಮೆರಿಕಾದ ಕೆಲಸವನ್ನು ತೊರೆದು ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರಲ್ಲಿ ಐಎಎಸ್ ಸೌಮ್ಯ ಅಗರ್ವಾಲ್ ಕೂಡ ಒಬ್ಬರು.
ಸೌಮ್ಯ ಅಗರ್ವಾಲ್ ಉತ್ತರ ಪ್ರದೇಶದ ಖ್ಯಾತ ಮಹಿಳಾ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಸೌಮ್ಯ ತಮ್ಮ ಬಾಲ್ಯವನ್ನು ಯುಪಿ ರಾಜಧಾನಿ ಲಕ್ನೋದಲ್ಲಿ ಕಳೆದಿದ್ದಾರೆ. ಅಲ್ಲಿನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ 12ನೇ ತರಗತಿವರೆಗೆ ಓದಿದ್ದಾರೆ. ಇವರ ತಂದೆ ಜ್ಞಾನಚಂದ್ ಅಗರ್ವಾಲ್ ರೈಲ್ವೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದರು. ಸೌಮ್ಯ ಅಗರ್ವಾಲ್ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಸಾಫ್ಟ್ ವೇರ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ 2004ರಲ್ಲಿ ಪುಣೆಯ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಬಳಿಕ ಹಲವು ತಿಂಗಳುಗಳ ನಂತರ ಕಂಪನಿ ಅವರನ್ನು ಲಂಡನ್ ಗೆ ಕಳುಹಿಸಿತು. ಸೌಮ್ಯ ಅಗರ್ವಾಲ್ ಲಂಡನ್ ನಲ್ಲೇ ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರು ಭಾರತಕ್ಕೆ ಮರಳಿದರು.
ಲಂಡನ್ ನಲ್ಲಿ ವಾಸಿಸುತ್ತಿದ್ದಾಗ ಸೌಮ್ಯ ತನ್ನ ತಂದೆಗೆ ಕರೆ ಮಾಡಿ ಭಾರತದಲ್ಲಿ ಅತ್ಯುನ್ನತ ಮಟ್ಟದ ಕೆಲಸ ಯಾವುದು ಎಂದು ಕೇಳಿದ್ದಳು. ಆಗ ಅವರ ತಂದೆ ಐಎಎಸ್ ಹುದ್ದೆ ಬಗ್ಗೆ ಹೇಳಿದರು. ಭಾರತಕ್ಕೆ ಬಂದ ನಂತರ ಸೌಮ್ಯ ಅಗರ್ವಾಲ್ ನಾಗರಿಕ ಸೇವೆಗಳಿಗೆ ಹೋಗಲು ಮನಸ್ಸು ಮಾಡಿದರು. ದೆಹಲಿಯಲ್ಲಿ 3 ತಿಂಗಳ ಕಾಲ ಕೋಚಿಂಗ್ ನಿಂದ ಮಾರ್ಗದರ್ಶನವನ್ನೂ ಪಡೆದರು. ಒಂದು ವರ್ಷದ ಕಠಿಣ ಪರಿಶ್ರಮದ ಬಳಿಕ ಮೊದಲ ಪ್ರಯತ್ನದಲ್ಲಿ 24 ನೇ ರ್ಯಾಂಕ್ನಲ್ಲಿ UPSC ಪರೀಕ್ಷೆಯಲ್ಲಿ ಪಾಸಾದರು.
2008 ರಲ್ಲಿ ಹೊಸದಾಗಿ ನೇಮಕಗೊಂಡ IAS ಸೌಮ್ಯ ಅಗರ್ವಾಲ್ ಕಾನ್ಪುರದ SDMನ ಜವಾಬ್ದಾರಿಯನ್ನು ವಹಿಸಿಕೊಂಡರು. ಸೌಮ್ಯ ಅಗರ್ವಾಲ್ ಅವರ ಅಜ್ಜ ಪಿ.ಸಿ.ಅಗರ್ವಾಲ್ ಪಿಡಬ್ಲ್ಯೂಡಿಯಲ್ಲಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಒಮ್ಮೆ UPSC ಪರೀಕ್ಷೆ ಬರೆಯಬೇಕು ಎಂದು ಅವರು ಯಾವಾಗಲೂ ಹೇಳುತ್ತಿದ್ದರಂತೆ . ಈಗ ಸೌಮ್ಯಾ ಅವರೇ ಅವರ ಕುಟುಂಬದಲ್ಲಿ UPSC ಪರೀಕ್ಷೆ ಬರೆದು ಯಶಸ್ವಿಯಾದ ಮಹಿಳೆಯಾಗಿದ್ದಾರೆ.