ದೆಹಲಿ,ಏ 02(DaijiworldNews/AA): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಇದೀಗ ಜಾರಿ ನಿರ್ದೇಶನಾಲಯವು ನನ್ನ ಜತೆ ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಘವ್ ಚಡ್ಡಾ ಅವರನ್ನು ಬಂಧಿಸಲಿದೆ ಎಂದು ದೆಹಲಿ ಸಚಿವ ಅತಿಶಿ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, ಶೀಘ್ರದಲ್ಲೇ ನಮ್ಮ ನಿವಾಸದ ಮೇಲೆ ಇಡಿ ದಾಳಿ ನಡೆಯಲಿದೆ. ನಂತರ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಿಜೆಪಿ ಈಗ ಆಮ್ ಆದ್ಮಿ ಪಕ್ಷದ ಮುಂಚೂಣಿಯ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
ವೈಯಕ್ತಿಕ ಸಂಪರ್ಕದ ಮೂಲಕ ಬಿಜೆಪಿ ಸೇರಲು ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿಗೆ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು. ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ.ಪ್ರತಿಯೊಬ್ಬ ಎಎಪಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರಿಂದ ಆರಂಭಿಸಿ ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ಈಗ ಅವರು ಇನ್ನೂ ನಾಲ್ವರು ಉನ್ನತ ನಾಯಕರನ್ನು ಬಂಧಿಸಲು ಬಯಸಿದ್ದಾರೆ. ಅದರಲ್ಲಿ ನಾನು, ರಾಘವ್ ಚಡ್ಡಾ, ದುರ್ಗೇಶ್ ಪಾಠಕ್ ಮತ್ತು ಸೌರಭ್ ಭಾರದ್ವಾಜ್ ಇದ್ದೀವಿ ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಬಂಧನದ ನಂತರ ಎಎಪಿ ಕುಸಿಯುತ್ತದೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಭಾನುವಾರ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳು ಒಗ್ಗೂಡುವುದನ್ನು ನೋಡಿ ಅವರು ಭಯಗೊಂಡಿದ್ದಾರೆ.ಆದ್ದರಿಂದ ಈಗ ಅವರು ಮುಂದಿನ ನಾಯಕತ್ವವನ್ನು ಗುರಿಯಾಗಿಸಲು ಬಯಸುತ್ತಾರೆ ಎಂದು ಅತಿಶಿ ಹೇಳಿದರು.
ತನ್ನ ಮೇಲೆ ಮತ್ತು ನನ್ನ ಸಂಬಂಧಿಕರ ಮೇಲೆ ದಾಳಿ ನಡೆಸಲಾಗುವುದು. ಆಗ ನಮಗೆ ಸಮನ್ಸ್ ಜಾರಿ ಮಾಡಿ ನಂತರ ಜೈಲಿಗೆ ಹಾಕಲಾಗುತ್ತದೆ. ಆದರೆ ನಾವು ಬಿಜೆಪಿಗೆ ಹೆದರುವುದಿಲ್ಲ ಎಂದು ಹೇಳಲು ಬಯಸುತ್ತೇನೆ. ನಮ್ಮನ್ನೆಲ್ಲ ಜೈಲಿಗೆ ಹಾಕಿ, ಕೊನೆಯುಸಿರು ಇರುವವರೆಗೂ ಅರವಿಂದ್ ಕೇಜ್ರಿವಾಲ್ ಜೊತೆ ನಿಲ್ಲುತ್ತೇವೆ. ಎಲ್ಲರನ್ನೂ ಜೈಲಿಗೆ ಹಾಕಿ.ಇತರ 10 ಜನರು ಆ ಜಾಗಕ್ಕೆ ಬರುತ್ತಾರೆ, ಅವರು ಅರವಿಂದ್ ಕೇಜ್ರಿವಾಲ್ ಅವರ ಹೋರಾಟದಲ್ಲಿ ಸೇರುತ್ತಾರೆ ಎಂದು ಅತಿಶಿ ಹೇಳಿದರು.
ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಇಡಿ ನ್ಯಾಯಾಲಯದಲ್ಲಿ ಹೇಳಿದ ಒಂದು ದಿನದ ನಂತರ ಅತಿಶಿ ಅವರ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ.