ತುಮಕೂರು, ಏ 03(DaijiworldNews/AA): ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅದರಂತೆ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಇಂದು ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬೆಂಬಲಿಗರೊಂದಿಗೆ ತೆರಳಿದಾಗ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ.
ವಿ ಸೋಮಣ್ಣ ಅವರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ತೆರಳಿದಾಗ ತುಮಕೂರು ಡಿವೈಎಸ್ ಪಿ ನೇತೃತ್ವದ ಪೊಲೀಸ್ ತಂಡ ಅವರನ್ನು ತಡೆದಿದೆ. ಬಳಿಕ ಅಭ್ಯರ್ಥಿ ಸೇರಿ 5 ಮಂದಿಗಿಂತ ಹೆಚ್ಚು ಜನ ಒಳಗೆ ಹೋಗುವಂತಿಲ್ಲ ಎಂದು ತಿಳಿಸಿದೆ. ಇದರಿಂದ ಕೋಪಗೊಂಡ ಸೋಮಣ್ಣ ಅವರು ಏನು ತಮಾಷೆ ಮಾಡುತ್ತಿದ್ದೀರಾ ಎಂದು ಪೊಲೀಸ್ ತಂಡದ ಮೇಲೆ ರೇಗಾಡಿದ್ದಾರೆ.
ನಂತರ ಪೊಲೀಸರು 5 ಕ್ಕಿಂತ ಹೆಚ್ಚು ಮಂದಿಯನ್ನು ನಾಮಪತ್ರ ಸಲ್ಲಿಸಲು ಒಳಗೆ ಕಳುಹಿಸಬಾರದೆಂಬ ಆದೇಶವಿದೆ. ಆ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಇದರಲ್ಲಿ ತಮಾಷೆ ವಿಷಯವಿಲ್ಲ ಎಂದು ಸೋಮಣ್ಣ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಆ ಬಳಿಕ ಸೋಮಣ್ಣ ಅವರು 5 ಮಂದಿಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.