ಉತ್ತರಾಖಂಡ, ಏ 04(DaijiworldNews/AK):ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವವರಿಗೆ ಹಲವು ಯಶೋಗಾಥೆಗಳು ಸ್ಪೂರ್ತಿ ದಾಯಕವಾಗಿರುತ್ತದೆ. ಇದೇ ರೀತಿ ಆಲ್ ಇಂಡಿಯಾ ರ್ಯಾಂಕಿಂಗ್ ನಲ್ಲಿ 53ನೇ ಸ್ಥಾನ ಪಡೆದ ಐಎಎಸ್ ಮುದ್ರಾ ಗೈರೊಲಾ ಯಶಸ್ಸು ಕೂಡ ಸ್ಪೂರ್ತಿದಾಯವಾಗಿದೆ. ಅವರು ವೈದ್ಯವೃತ್ತಿ ಬಿಟ್ಟು ಐಎಎಸ್ ಆಯ್ಕೆ ಮಾಡಿಕೊಂಡವರು. ಈ ಸಾಧೆಯ ಕಥೆ ಇಲ್ಲಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗ್ ಮೂಲದ ಇವರು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿನಲ್ಲಿ ತನ್ನ ಮೆಡಿಕಲ್ ಅಧ್ಯಯನವನ್ನು ಬಿಟ್ಟರು. ತನ್ನ ಅಪ್ಪನಂತೆ ತಾನೂ ಕೂಡ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರು. ಆದರೆ ಮೊದಲ ಪ್ರಯತ್ನದಲ್ಲಿ ಮುದ್ರಾ ಯಶಸ್ಸು ಕಾಣಲಿಲ್ಲ. ಸಂದರ್ಶನದ ಹಂತದಲ್ಲಿ ಫೇಲ್ ಆದರು.
ಬಳಿಕ ತನ್ನ ತಂದೆಯಂತೆ ಐಎಎಸ್ ಅಧಿಕಾರಿಯಾಗಬೇಕೆಂದರೆ ಸಾಕಷ್ಟು ಸಮಯವನ್ನು ಅಧ್ಯಯನಕ್ಕೆ ನೀಡಬೇಕೆಂದು ಅರಿವಾಗಿ ಅವರು ತನ್ನ ಮೆಡಿಕಲ್ ಅಧ್ಯಯನವನ್ನು ಬಿಟ್ಟು ಯುಪಿಎಸ್ ಸಿ ಅಧ್ಯಯನ ಆರಂಭಿಸಿದರು. ಶಾಲಾ ಕಾಲೇಜು ಹಂತದಲ್ಲಿಯೇ ಇವರು ರ್ಯಾಂಕ್ ವಿದ್ಯಾರ್ಥಿನಿ. ಆದರೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ಲಭಿಸಿಲ್ಲ.
ಇಂಟರ್ ಮೀಡಿಯೆಟ್ ಮುಗಿಸಿದ ಬಳಿಕ ಇವರು ಬಿಡಿಎಸ್ ಅಂದರೆ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಆಯ್ಕೆ ಮಾಡಿಕೊಂಡರು. ಮುಂಬೈ ಮೆಡಿಕಲ್ ಕಾಲೇಜಿನಲ್ಲಿ ಓದುತ್ತ ಬಿಡಿಎಸ್ನಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಪದವಿ ಮುಗಿಸಿದ ಬಳಿಕ ಅವರು ದೆಹಲಿಗೆ ಮರಳಿದರು. ಎಂಡಿಎಸ್ ಗೆ ಪ್ರವೇಶ ಪಡೆದರು. ಆದರೆ, ಇವರ ತಂದೆಗೆ ತನ್ನ ಮಗಳು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಾಗಿತ್ತು.
ಅಲ್ಲದೇ ಮುದ್ರಾ ಅವರಿಗೂ ಮನಸ್ಸಿನಲ್ಲಿ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಇತ್ತ ವೈದ್ಯಕೀಯ ವೃತ್ತಿಯ ಮೇಲೂ ಒಲವಿತ್ತು. ಕೊನೆಗೆ ಐಎಎಸ್ ಕನಸಿಗೆ ಒತ್ತು ನೀಡಿದರು. ತನ್ನ ಎಂಡಿಎಸ್ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿದರು. ಮೊದಲ ಪ್ರಯತ್ನದಲ್ಲಿ ಸಂದರ್ಶನ ಹಂತದಲ್ಲಿ ವಿಫಲರಾದರು. 2019ರಲ್ಲಿ ಮರಳಿ ಯತ್ನವ ಮಾಡಿದರು. ಆದರೆ, ಅಂತಿಮ ಸುತ್ತಿನಲ್ಲಿ ವಿಫಲವಾದರು.
ಮರಳಿ ಪ್ರಯತ್ನವ ಮಾಡುವ ಹಾಗೇ 2020ರಲ್ಲಿ ಪ್ರಯತ್ನ ನಡೆಸಿದರು. ಆದರೆ, ಈ ಸಮಯದಲ್ಲಿ ಮುಖ್ಯ ಪರೀಕ್ಷೆ ಪಾಸ್ ಆಗಲು ಇವರಿಂದ ಸಾಧ್ಯವಾಗಿಲ್ಲ. 2021ರಲ್ಲಿ ಮತ್ತೆ ಪ್ರಯತ್ನ ನಡೆಸಿದರು. 165ನೇ ರ್ಯಾಂಕ್ ಪಡೆದರು. ಆದರೆ, ಈ ರ್ಯಾಂಕ್ ಪಡೆದರೆ ಐಪಿಎಸ್ ಅಧಿಕಾರಿಯಾಗಬಹುದು, ಐಎಎಸ್ ಅಧಿಕಾರಿಯಾಗಲು ಸಾಧ್ಯವಿಲ್ಲ. ಹೀಗಾಗಿ, 2022ರಲ್ಲಿ ಮತ್ತೆ ಯುಪಿಎಸ್ ಸಿ ಪರೀಕ್ಷೆ ಬರೆದರು. ಈ ಬಾರಿ 53ನೇ ರ್ಯಾಂಕ್ ಪಡೆದರು ಐಎಎಸ್ ಆಫೀಸರ್ ಆಗಿ ಆಯ್ಕೆಯಾದರು. ಹಲವು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ವಿಫಲವಾದರೂ ಕೊನೆಗೆ ಯಶಸ್ಸು ಪಡೆದು ಐಎಎಸ್ ಅಧಿಕಾರಿಯಾದರು.