ದೆಹಲಿ, ಏ 04(DaijiworldNews/AA): ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾ ಮಾಡುವಂತೆ ಕೋರಿ ಸಲ್ಲಿಸಲಾದ ಮತ್ತೊಂದು ಮನವಿಯನ್ನು ಸತತ ಮೂರನೇ ಬಾರಿಗೆ ದೆಹಲಿ ಹೈಕೋರ್ಟ್ ತಿರಸ್ಕಾರ ಮಾಡಿದೆ.
ಹಂಗಾಮಿ ಮುಖ್ಯ ನ್ಯಾ. ಮನಮೋಹನ್ ನೇತೃತ್ವದ ಪೀಠವು ಪ್ರಜಾಪ್ರಭುತ್ವವು ತನ್ನದೇ ಆದ ಹಾದಿಯನ್ನು ತೆಗೆದುಕೊಳ್ಳಲಿ, ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ತಿಳಿಸಿದೆ.
ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ಬಂಧಿಸಿದ ಬಳಿಕ ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸಿಎಂ ಆಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ಕೇಜ್ರಿವಾಲ್ ಅವರಿಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ವಿಭಾಗೀಯ ಪೀಠ ತಿಳಿಸಿದೆ.