ಬೆಂಗಳೂರು, ಏ 05 (DaijiworldNews/AK): ನಾನು ರಾಜಕೀಯದಲ್ಲಿ ಎಷ್ಟು ದಿನ ಇರುತ್ತೇನೋ, ಬಿಡುತ್ತೇನೋ ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನೂತನ ಕಾರ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಕೆಲಸ ಮಾಡಬೇಕು. ವಿಸಿಟಿಂಗ್ ಕಾರ್ಡ್ ಇಟ್ಟುಕೊಂಡು ಓಡಾಡಿದರೆ ಆಗಲ್ಲ. ಕೆಲಸ ಮಾಡಿಲ್ಲ ಎಂದರೆ ಚುನಾವಣೆ ಬಳಿಕ ಮಾಜಿಗಳು ಆಗುತ್ತೀರಿ. ನಾನು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ. ನೀವೆಲ್ಲಾ ಕೆಲಸ ಮಾಡಬೇಕು, ನಿಮಗೆ ಕಾರು, ರೂಂ ಕೊಡಲ್ಲ. ನಿಮ್ಮದೇ ಕಾರು ಬಳಸಿಕೊಂಡು ಸುತ್ತಬೇಕು ಎಂದು ಹೇಳಿದರು.
ಇದೀಗ ಡಿಕೆ ಶಿವಕುಮಾರ್ ತಾವು ರಾಜಕಾರಣದಲ್ಲಿ ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ ಎನ್ನುವ ಆಡಿದ ಮಾತುಗಳು ಅಚ್ಚರಿ ಮೂಡಿಸಿದೆ. ನಾವೆಲ್ಲಾ ವಿದ್ಯಾರ್ಥಿ ಘಟಕದಿಂದ ಬಂದಿದ್ದೇವೆ. ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣರನ್ನು ನೆನಪಿಸಿಕೊಳ್ಳಬೇಕು. ಪಕ್ಷಕ್ಕೆ ಎಲ್ಲರೂ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ನಾವು NSUI ಘಟಕದಿಂದ ಬೆಳೆದು ಬಂದವರು. NSUIನಲ್ಲಿ ನನಗೆ ಟಿಕೆಟ್ ಕೊಟ್ಟಿರಲಿಲ್ಲ, ಯಾರು ಎಂದು ಹೇಳಲ್ಲ. ನಾವು ಹಂಗೋ ಹಿಂಗೋ ಬೆಳೆದುಕೊಂಡು ಬಂದಿದ್ದೇವೆ ಎಂದು ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಮೊನ್ನೆ ಲೋಕಸಭಾ ಚುನಾವಣೆ ಪ್ರಚಾರದ ಸಭೆಯಲ್ಲಿ ಸಿಎಂ ಸಿದ್ದರಾಮ್ಯಯ ಅವರು, ನಾನು ಮುಖ್ಯಮಂತ್ರಿಯಾಗಿ ಉಳಿಯಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಬೇಕು ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣೆ ಹೊಸ್ತಲಲ್ಲಿ ಇರುವಾಗ ಸಿಎಂ ಯಾಕೆ ಈ ರೀತಿ ಹೇಳಿಕೆ ನೀಡಿದರು ಎಂದು ಬೆಂಬಲಿಗರು, ಮುಖಂಡರುಗಳಲ್ಲಿ ಭಾರೀ ಚರ್ಚೆಯಾಗಿದೆ.
ಇದೀಗ ಸಿಎಂ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಸಹ ನಾನು ಎಷ್ಟು ದಿನ ರಾಜಕಾರಣದಲ್ಲಿ ಇರುತ್ತೇನೆ ಗೊತ್ತಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿ ಆಶ್ಚರ್ಯಕ್ಕೆ ಕಾರಣವಾಗಿದೆ.